ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಫೆಬ್ರವರಿ 28ರಿಂದ ಆವರಿಸಿಕೊಂಡಿದ್ದ ಯುದ್ಧದ ಕರಿಛಾಯೆ ಕೊನೆಗೊಂಡ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಹರಿವು ಪುನಃ ಸ್ಥಾಪಿಸಿದ ನಂತರ ಜಾಗತಿಕ ಕಚ್ಚಾತೈಲಗಳ ಬೆಲೆ ಇಳಿಯತೊ ಡಗಿದೆ. ಅದಕ್ಕೆ ಹೊಂದಿಕೊಂಡು ಭಾರತೀಯ ತೈಲ ಮಾರುಕಟ್ಟೆ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆಯನ್ನು ಇಳಿಸಿದೆ. ಇದು ದೇಶದಲ್ಲಿ ಇಂದಿನಿಂದಲೇ ವಿದ್ಯುಕ್ತವಾಗಿ ಜ್ಯಾರಿಗೆ ಬಂದಿದೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂ.ನಂತೆ ಇಳಿಕೆ ಉಂಟಾಗಿದೆ. ಇದರ ಬೆನ್ನಲ್ಲೇ ಜಾಗತಿಕ ತೈಲ ದರ ಕುಸಿತದ ಹಿನ್ನೆಲೆಯಲ್ಲಿ ನಯಾರ ಎನರ್ಜಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 5ರೂ.ನಂತೆ ಹಾಗೂ ಡೀಸೆಲ್ ಬೆಲೆ 3 ರೂ.ನಂತೆ ಇಳಿಸಲಾಗಿದೆ. ದೇಶಾದ್ಯಂತ ನಯಾರದ 7೦೦೦ಕ್ಕೂ ಹೆಚ್ಚು ಇಂಧನ ಕೇಂದ್ರಗಳಲ್ಲಿ ಪರಿಷ್ಕೃತ ದರಗಳು ಇಂದಿನಿಂದ ಜ್ಯಾರಿಗೆ ಬಂದಿವೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಮೌಲ್ಯ ವರ್ಧಕ ತೆರಿಗೆ (ವ್ಯಾಟ್)ಗೆ ಹೊಂದಿ ಕೊಂಡು ಸ್ಥಳೀಯ ಸುಂಕಗಳನ್ನು ಅವಲಂಭಿಸಿ ವಾಸ್ತವಿಕ ಬೆಲೆಗಳು ರಾಜ್ಯಗಳಲ್ಲಿ ಬದಲಾಗುತ್ತಿದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿದಿರುವುದು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಸಿಹಿಸುದ್ಧಿ ಲಭಿಸಿದಂತಾಗಿದೆ. ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಇಂಧನ ಪೂರೈಕೆಗೆ ಉಂಟಾದ ಅಡಚಣೆಯ ನಂತರ ಭಾರತದಾದ್ಯಂತ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಒಟ್ಟು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಮಾರ್ಚ್ನಲ್ಲಿ 144 ರೂ, ಎಪ್ರಿಲ್ನಲ್ಲಿ 195.50 ರೂ, ಮೇಯಲ್ಲಿ 993 ರೂ. ಹಾಗೂ ಜೂನ್ನಲ್ಲಿ 42 ರೂ.ನಂತೆ ಬೆಲೆ ಹೆಚ್ಚಿಸಲಾಗಿತ್ತು. ಹೀಗೆ ಒಟ್ಟು ನಾಲ್ಕು ಬಾರಿಯಾಗಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಟ್ಟು 1,374.50 ರೂ. ಏರಿಕೆ ಉಂಟಾಗಿತ್ತು.
ಇದೇ ರೀತಿ ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಎರಡು ಬಾರಿಯಾಗಿ 89 ರೂ.ನಷ್ಟು ಹೆಚ್ಚಿಸಲಾಗಿತ್ತು. ಇದರಂತೆ ಮಾರ್ಚ್ನಲ್ಲಿ 60 ರೂ., ಜೂನ್ನಲ್ಲಿ 29 ರೂ.ನಂತೆ ಹೆಚ್ಚಿಸಲಾಗಿತ್ತು.







