ಸ್ವರ್ಗ ಸೇತುವೆ ಬಳಿ ರಸ್ತೆ ಬದಿಯ ಹೊಂಡಕ್ಕಿಳಿದ ಲಾರಿ: ಎಕ್ಸಿಲ್ ತುಂಡಾಗಿ ಸಂಚಾರ ಮೊಟಕು

ಪೆರ್ಲ: ಪೆರ್ಲ- ಸ್ವರ್ಗ ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ಲಾರಿಯೊಂದರ ಎಕ್ಸಿಲ್ ತುಂಡಾಗಿ ಅರ್ಧ ಗಂಟೆ ಕಾಲ ಬಸ್ ಸಹಿತ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸ್ವರ್ಗ ಸೇತುವೆ ಬಳಿ ಸಂಭವಿಸಿದೆ. ಪಾಣಾಜೆ ಭಾಗದಿಂದ ಗೆರಟೆ ಹೇರಿಕೊಂಡು ಬರುತ್ತಿದ್ದ ಲಾರಿಗೆ ಸ್ವರ್ಗ ಸೇತುವೆಯ ಮುಂದಿನ ತಿರುವಿನಲ್ಲಿ ಪೆರ್ಲ ಕಡೆಯಿಂದ ಬಂದ ವಾಹನವೊಂದು ಎದುರಾಗಿದೆ. ಈ ವಾಹನಕ್ಕೆ ಸಂಚರಿಸಲು ಸ್ಥಳ ಬಿಟ್ಟುಕೊಡುವ ಅವಸರದಲ್ಲಿ ಲಾರಿ ಚಾಲಕ ವಾಹನವನ್ನು ರಸ್ತೆಯಿಂದ ಕೆಳಗಿಳಿಸಿರುವುದಾಗಿ ಶಂಕಿಸಲಾಗಿದೆ. ಈ ವೇಳೆ ಲಾರಿಯ ಎಕ್ಸಿಲ್ ತುಂಡಾಗಿ ಲಾರಿ ರಸ್ತೆಯಲ್ಲಿ ಸಿಲುಕಿಕೊಂಡಿದ್ದು, ಎರಡೂ ಬದಿಗಳ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಸಾರ್ವಜನಿಕರ ಸಹಾಯದೊಂದಿಗೆ ಲಾರಿಯನ್ನು ರಸ್ತೆ ಬದಿಗೆ ಸರಿಸಲಾಗಿದೆ. ಸುಮಾರು ಅರ್ಧ ಗಂಟೆ ವೇಳೆ ಈ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡಿದೆ. ಪೆರ್ಲದಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿ ನಡೆಸಲು ಸಾರ್ವ ಜನಿಕರು ಹಲವು ಬಾರಿ ಒತ್ತಾಯಿ ಸಿದ್ದರೂ ಯಾವುದೇ ಕ್ರಮ ಉಂಟಾಗಿ ಲ್ಲವೆನ್ನಲಾಗಿದೆ.  ಅಗಲ ಕಿರಿದಾದ ಈ ರಸ್ತೆಯಲ್ಲಿ ದಿನನಿತ ನೂರಾರು ವಾಹನಗಳು ಸಂಚರಿಸುತ್ತಿದ್ದು ನಿತ್ಯವೂ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ.

You cannot copy contents of this page