ಕಾಸರಗೋಡು: ನೂರಾರು ವಿದ್ಯಾರ್ಥಿಗಳು, ಪ್ರಯಾಣಿಕರು ತಲುಪುವ ಕಾಸರಗೋಡು ನಗರಸಭಾ ಹೊಸ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಸಮಾಜದ್ರೋಹಿಗಳು, ಮಾದಕ ಮಾಫಿಯಾಗಳ ಕೇಂದ್ರವಾಗಿ ಬದಲಾಗು ತ್ತಿದ್ದು, ಇದರಿಂದ ವ್ಯಾಪಾರಿಗಳು, ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರಿಗೆ ಸಂಕಷ್ಟ ಉಂಟಾಗುತ್ತಿದೆ ಎಂದು ದೂರಲಾಗಿದೆ.
ಹಗಲು ಹೊತ್ತಿನಲ್ಲಿ ಇದೇ ನಿಲ್ದಾಣದಲ್ಲಿ ಗೂಂಡಾಗಳ ಅಟ್ಟಹಾಸ ನಡೆಯುತ್ತಿರುವುದಾಗಿ ವ್ಯಾಪಾರಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವುದಾಗಿಯೂ ದೂರಲಾಗಿದೆ. ಕೆಲವು ದಿನದ ಹಿಂದೆ ಈ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಘರ್ಷಣೆ ಉಂಟಾಗಿದೆ. ಮೂರು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಸಾರ್ವಜನಿಕ ಸ್ಥಳದಲ್ಲಿ ಜಗಳದಲ್ಲಿ ಏರ್ಪಟ್ಟಿರುವುದಕ್ಕೆ ಗುರುತು ಹಚ್ಚಬಹುದಾದ ೧೦ ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. ಶಾಲೆ ಬಿಡುವ ಸಂಜೆ ಹೊತ್ತಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ಸಮಾಜದ್ರೋಹಿಗಳ ಬಂದು ತಲುಪುತ್ತಿದ್ದು, ಇದರಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗುತ್ತಿದೆ.
ರಾತ್ರಿ ವೇಳೆ ನಗರಸಭೆಯ ಶಾಪಿಂಕ್ ಕಾಂಪ್ಲೆಕ್ಸ್‌ನ್ನು ಇವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದು, ಮಾದಕ ಪದಾರ್ಥ ಸಹಿತ ವಿವಿಧ ದಂಧೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿಗೆ ಆಪರೇಷನ್ ತೂಫಾನ್ ತಲುಪಲಿಲ್ಲವೆಂದು ಹೇಳಲಾಗುತ್ತಿದೆ. ಶಾಪಿಂಗ್ ಕಾಂಪ್ಲೆಕ್ಸ್‌ನ ೨ನೇ ಮಹಡಿಯಲ್ಲಿ ಮಾದಕ ಪದಾರ್ಥ ಮಾರಾಟ ವ್ಯಾಪಾರ, ಮದ್ಯಪಾನ ನಡೆಯುತ್ತಿದ್ದು, ವೇಶ್ಯಾವಾಟಿಕೆ ದಂಧೆಯೂ ನಡೆಯುತ್ತಿದೆ ಎನ್ನಲಾಗಿದೆ. ಹೊಸ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಹಾಯ ಕೇಂದ್ರ ಕಾರ್ಯಾಚರಿಸುತ್ತಿದ್ದರೂ ಪೂರ್ತಿ ಸಮಯ ಪೊಲೀಸರ ಸೇವೆ ಇಲ್ಲಿ ಲಭಿಸುತ್ತಿಲ್ಲವೆಂದು ದೂರಲಾಗಿದೆ. ರಾತ್ರಿ ೧೨ ಗಂಟೆವರೆಗಾದರೂ ಇಲ್ಲಿ ಪೊಲೀಸರ ನಿಗಾ ಬೇಕೆಂದು ಹಾಗೂ ನಗರದಲ್ಲಿ ಪೊಲೀಸರ ಪಟ್ರೋಲಿಂಗ್ ತೀವ್ರಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.







