ಬಂದಡ್ಕ: ಕೆಲವು ಸಮಯಗಳ ಬಳಿಕ ಮತ್ತೆ ಬಂದಡ್ಕ ಮಾಣಿಮೂಲೆ, ಶ್ರೀಮಲ ವಲಯಗಳಲ್ಲಿ ಕಾಡಾನೆ ಗಳು ಕೃಷಿನಾಶ ಉಂಟುಮಾಡಿವೆ. ಜನವಾಸ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ವ್ಯಾಪಕವಾಗಿ ರಾದ್ಧಾಂತ ನಡೆಸುತ್ತಿವೆ. ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಶ್ರೀಮಲದಲ್ಲಿ ಎರಡು ಆನೆಗಳು ತಲುಪಿವೆ. ಕೃಷಿಕನಾದ ಜೋಸ್ ವರ್ಕಿಯವರ ತೋಟದಲ್ಲಿ ಇವು ನಾಶವುಂಟು ಮಾಡಿವೆ. ಕಂಗು ಹಾಗೂ ವಿವಿಧ ಸಸ್ಯಗಳನ್ನು ನಾಶ ಮಾಡಿ ತಿಂದು ಭೀತಿ ಸೃಷ್ಟಿಸಿವೆ. ಹಲವು ದಿನಗಳಿಂದ ಈ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕೃಷಿಕರ ಆದಾಯ ಮೂಲವನ್ನೇ ನಾಶಮಾಡುತ್ತಿವೆ. ಇದರಿಂದ ಭಾರೀ ಆರ್ಥಿಕ ನಷ್ಟ ಉಂಟಾಗಿರುವುದಾಗಿ ಕೃಷಿಕರು ದೂರಿದ್ದಾರೆ. ಕೃಷಿ ನಾಶದ ಜೊತೆಗೆ ಜನವಾಸ ಪ್ರದೇಶಕ್ಕೆ ತಲುಪುವ ಕಾಡಾನೆಗಳು ಜನರ ಜೀವಕ್ಕೂ ಬೆದರಿಕೆ ಸೃಷ್ಟಿಸುತ್ತಿವೆಯೆನ್ನಲಾಗಿದೆ. ಕಾಡಾನೆಗಳ ಉಪಟಳವನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.






