ಕುಂಬಳೆಯಲ್ಲಿ ಖಾಸಗಿ ಬಸ್, ಆಟೋ ರಿಕ್ಷಾಗಳ ನಿಲುಗಡೆ ಸಮಸ್ಯೆ: ಪಂ.ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಚರ್ಚೆ ಪರಾಭವ

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‌ಗಳು ಹಾಗೂ ಆಟೋ ರಿಕ್ಷಾಗಳ ನಿಲುಗಡೆಗೆ ಸಂಬಂಧಿಸಿದ ತರ್ಕ ಪರಿಹರಿಸಲು ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ನೇತೃತ್ವದಲ್ಲಿ ನಿನ್ನೆ ನಡೆದ ಚರ್ಚೆ ವಿಫಲಗೊಂಡಿದೆ. ಕುಂಬಳೆ ಪಂಚಾಯತ್ ಕಚೇರಿ ಯಲ್ಲಿ ನಿನ್ನೆ ಅಪರಾಹ್ನ ನಡೆದ ಚರ್ಚೆಯಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನೌಕರರು ಪಾಲ್ಗೊಂಡಿದ್ದರು. ಸೀತಾಂಗೋಳಿ ಭಾಗದಿಂದ ಬರುವ ಬಸ್‌ಗಳು ಕುಂಬಳೆ ಹಳೆ ಬಸ್ ನಿಲ್ದಾಣಕ್ಕೆ ತಲುಪಿ   ಪ್ರಯಾಣಿಕರನ್ನು ಅಲ್ಲಿ ಇಳಿಸಿದ ಬಳಿಕ ಜಿಲ್ಲಾ ಸಹಕಾರಿ ಆಸ್ಪತ್ರೆ ಸಮೀಪದ ೬ನೇ ನಂಬ್ರ ಬಸ್ ವೈಟಿಂಗ್ ಶೆಡ್‌ನ ಮುಂಭಾಗದಲ್ಲಿ ನಿಲ್ಲಿಸಬೇಕು. ಅದೇ ರೀತಿ  ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟ್ ಬಳಿಯಿಂದ ಆಟೋ ರಿಕ್ಷಾಗಳನ್ನು ಬೇರೆಡೆಗಳಲ್ಲಿ ನಿಲುಗಡೆ ಗೊಳಿಸುವಂತೆ ಪಂಚಾಯತ್ ಅಧ್ಯಕ್ಷರು ತಿಳಿಸಿದ್ದರು.  ಇದನ್ನು ಬಸ್ ಹಾಗೂ ಆಟೋ ರಿಕ್ಷಾ ನೌಕರರು ಅಂಗೀಕರಿಸಲಿಲ್ಲ. ಬಸ್‌ಗಳನ್ನು   ಹಳೆ ಸ್ ನಿಲ್ದಾಣಕ್ಕೆ ತಲುಪಿಸಿದರೆ ಅಲ್ಲಿಂದ ಮರಳಲು ಕಷ್ಟವಾಗುತ್ತಿದೆ. ಇದು ಸಮಯದ  ಅಭಾವಕ್ಕೂ ಕಾರಣವಾಗುತ್ತಿದೆ ಎಂದು ಬಸ್ ನೌಕರರು ತಿಳಿಸಿದ್ದಾರೆ. ಕಡ್ಡಾಯವಾಗಿ ಬಸ್‌ಗಳನ್ನು  ಹಳೆ ಬಸ್ ನಿಲ್ದಾಣಕ್ಕೆ ತಲುಪಿಸಿ ಪ್ರಯಾಣಿಕರನ್ನು ಇಳಿಸಬೇಕೆಂದು ತಿಳಿಸಿದಲ್ಲಿ ಅದರ ವಿರುದ್ಧ ಹೈಕೋರ್ಟನ್ನು ಸಮೀಪಿಸುವುದಾಗಿ ಬಸ್ ನೌಕರರು ಹಾಗೂ ಮಾಲಕರು ತಿಳಿಸಿದ್ದಾರೆ.  ಪ್ರಸ್ತುತ ಬಸ್‌ಗಳನ್ನು ಮಂಗಳೂರು, ಕಾಸರಗೋಡು ಭಾಗಕ್ಕೆ ತೆರಳುವ ಬಸ್ ವೈಟಿಂಗ್ ಶೆಡ್ ಸಮೀಪ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ ಬಳಿಕ   ಜಿಲ್ಲಾ ಸಹಕಾರಿ ಆಸ್ಪತ್ರೆ ಸಮೀಪದ ಬಸ್ ವೈಟಿಂಗ್ ಶೆಡ್‌ನ ಮುಂಭಾಗದಲ್ಲಿ ನಿಲ್ಲಿಸಲಾಗುತ್ತಿದೆ.

You cannot copy contents of this page