ಹೆಚ್ಚುತ್ತಿರುವ ಬಿಸಿಲಿನ ತಾಪ: ಜಲಮೂಲಗಳಲ್ಲಿ ನೀರಿನ ಮಟ್ಟ ಕುಸಿದು ಕೃಷಿಕರಲ್ಲಿ ಆತಂಕ

ಉಪ್ಪಳ: ‘ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ…’ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕೆಲವರಾದರೂ ಈ ಹಾಡನ್ನು ಕಲಿತಿರಬಹುದು. ಈಗ ಪರಿಸ್ಥಿತಿ ಮತ್ತೆ ಅದೇ ಹಂತಕ್ಕೆ ತಲುಪಿದೆ. ಮಳೆ ಸುರಿಯದೆ ಜಿಲ್ಲೆಯ ವಿವಿಧ ನದಿಗಳು ಬತ್ತಿ ಬರಡಾಗುವ ಸ್ಥಿತಿಗೆ ತಲುಪಿದೆ. ತೋಡುಗಳಲ್ಲಿ ನೀರ ಹರಿವು ನಿಂತುಹೋಗಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದು, ನೀರು ಆವಿಯಾಗುವ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಹೊಳೆ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಮೊದಲಾದ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳ ಕೃಷಿಕರು ನೀರಿಲ್ಲದೆ ಈಗಾಗಲೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಭತ್ತ ಕೃಷಿ ಮಾಡಿರುವ ಕೃಷಿಕರು ಗದ್ದೆಗೆ ನೀರು ಹಾಕಲು ಸಂಕಷ್ಟ ಪಡುತ್ತಿದ್ದಾರೆ. ಕೃಷಿಗೆ ಹೊರತಾಗಿ ಕುಡಿಯಲೂ ಕೂಡಾ ನೀರಿಲ್ಲದ ಸ್ಥಿತಿ ಉಂಟಾಗಬಹುದೆಂಬ ಭೀತಿ ಈಗಾಗಲೇ ಎದುರಾಗಿದೆ. ಅಡಿಕೆ, ತೆಂಗು, ಕೃಷಿಗೆ ನೀರುಣಿಸಲು ನೀರು ಲಭ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಮಳೆ ಇನ್ನೂ ಸುರಿಯದಿದ್ದರೆ ಕುಡಿಯುವ ನೀರಿಗೆ ಕೂಡಾ ತತ್ವಾರ ಉಂಟಾಗಬಹುದೆಂಬ ಭೀತಿ ಸಾರ್ವಜನಿಕರಲ್ಲಿದೆ.

You cannot copy contents of this page