ದೇರಂಬಳ ಹೊಳೆಗೆ ಬಿದ್ದ ಯುವತಿಯ ಪ್ರಾಣ ರಕ್ಷಿಸಿದ ಯುವಕ: ಹೊಳೆಗೆ ಸಂಕ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು

ಉಪ್ಪಳ: ಅಡಿಕೆ ಮರದ ಸಂಕದ ಮೇಲೆ  ನಡೆದುಹೋಗುತ್ತಿದ್ದಾಗ  ಆಯತಪ್ಪಿ ಹೊಳೆಗೆ ಬಿದ್ದ ಯುವತಿಯನ್ನು ಯುವಕನೋರ್ವ ಅತೀ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ. ಮೀಂಜ ಬಳಿಯ ದೇರಂಬಳದಲ್ಲಿ ನಿನ್ನೆ ಸಂಜೆ ಸುಮಾರು 4 ಗಂಟೆ ವೇಳೆ ಈ ಘಟನೆ ನಡೆದಿದೆ.

ದೇರಂಬಳ ತಜಂಕುರಿಯ ಐತಪ್ಪ  ಪೂಜಾರಿಯವರ ಪುತ್ರಿ ಸುಶ್ಮಿತಾ (23) ಹೊಳೆಗೆ ಬಿದ್ದಿದ್ದು, ಈಕೆಯನ್ನು ಸ್ಥಳೀಯ ನಿವಾಸಿ ಉದಯಕುಮಾರ್ ಶೆಟ್ಟಿ (40) ಎಂಬವರು ಅತೀ ಸಾಹಸದಿಂದ ರಕ್ಷಿಸಿದ್ದಾರೆ. ಪುತ್ತೂರಿನ ಕಾಲೇಜಿನಲ್ಲಿ  ಕಲಿಯುತ್ತಿರುವ ಸಹೋದರಿ ನಿಶ್ಮಿತಾಳನ್ನು ಜೋಡುಕಲ್ಲಿನಿಂದ ಕರೆದುಕೊಂಡು  ಮನೆಗೆ  ಬರುತ್ತಿದ್ದಾಗ  ಸುಶ್ಮಿತಾ ಆಯತಪ್ಪಿ ಸಂಕದಿಂದ ಹೊಳೆಗೆ ಬಿದ್ದಿದ್ದಾರೆ.  ಈ ವೇಳೆ ಸಹೋದರಿ ನಿಶ್ಮಿತಾಳ ಬೊಬ್ಬೆ ಕೇಳಿ ಅಲ್ಪದೂರದಲ್ಲಿದ್ದ ಉದಯ ಕುಮಾರ್ ಶೆಟ್ಟಿ ಅಲ್ಲಿಗೆ ಓಡಿ ತಲುಪಿದ್ದರು. ಈ ವೇಳೆ ಧಾರಾಕಾರ   ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಸುಮಾರು 200 ಮೀಟರ್‌ನಷ್ಟು ದೂರಕ್ಕೆ ಸುಶ್ಮಿತಾ ತೇಲಿ ಹೋಗಿದ್ದರು. ಅದನ್ನು ಕಂಡ ಉದಯ ಕುಮಾರ್ ಶೆಟ್ಟಿ ಹೊಳೆಗೆ ಹಾರಿ ಸುಶ್ಮಿತಾರನ್ನು  ಅತೀ ಸಾಹಸದಿಂದ ಹಿಡಿದು ಮೇಲಕ್ಕೆ ತಲುಪಿಸಿ ಅಪಾಯದಿಂದ ರಕ್ಷಿಸಿದ್ದಾರೆ.  ಸುಶ್ಮಿತಾರ ಕೈಯಲಿದ್ದ ಬ್ಯಾಗ್‌ನಲ್ಲಿ    ನಿಶ್ಮಿತಾರ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರಮಾಣಪತ್ರಗಳು, ಟ್ಯಾಬ್, ಎರಡು ಮೊಬೈಲ್ ಫೋನ್‌ಗಳಿದ್ದು ಅವುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.   ಸುಶ್ಮಿತಾರನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು.

ಮಂಗಲ್ಪಾಡಿ ಹಾಗೂ ಮೀಂಜ ಪಂಚಾಯತ್‌ನ್ನು ಸಂಪರ್ಕಿಸುವ ದೇರಂಬಳ ಹೊಳೆಗೆ ಹಲವು ವರ್ಷಗಳ ಹಿಂದೆ ಕಾಂಕ್ರೀಟ್ ಸಂಕ ನಿರ್ಮಿಸಲಾ ಗಿತ್ತು. ಅದರ ಅರ್ಧಭಾಗ  ಕೆಲವು ವರ್ಷಗಳ ಹಿಂದೆ ಮುರಿದುಬಿದ್ದಿತ್ತು. ಬಳಿಕ ಅದರ ಮರುನಿರ್ಮಾಣಕ್ಕೆ ಕ್ರಮ ಉಂಟಾಗಲಿಲ್ಲ. ಇದರಿಂದ ಇಲ್ಲಿನ ನಾಗರಿಕರು  ಅಡಿಕೆ ಮರಗಳ ಸಂಕ ನಿರ್ಮಿಸಿ ಆ ಮೂಲಕ ನಡೆದು ಹೋಗುತ್ತಿದ್ದಾರೆ. ಇಲ್ಲಿ ಸಂಕ ನಿರ್ಮಿಸಬೇಕೆಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ನಾಗರಿಕರು ಮುಂದಿರಿಸುತ್ತಿದ್ದಾರೆ. ಆದರೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಭಾಗದಿಂದ ಅದಕ್ಕೆ ಕ್ರಮವುಂಟಾಗಿಲ್ಲವೆಂದು ನಾಗರಿಕರು ತಿಳಿಸುತ್ತಿದ್ದಾರೆ.  ಮಳೆಗಾಲದಲ್ಲಿ ಈ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿ ರುವುದು  ಆತಂಕಕ್ಕೆ ಕಾರಣವಾಗುತ್ತಿದೆ. ಇದರಿಂದ ಜತೆಗೆ ಯಾರಾದರೂ ಇದ್ದರೆ ಮಾತ್ರವೇ ಸಂಕ ದಾಟಬೇಕಾಗಿ ಬರುತ್ತಿದೆ. ನಿನ್ನೆ ಈ ಸಂಕದಿಂದ ಹೊಳೆಗೆ ಬಿದ್ದ ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿಯವರ ಸಾಹಸಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

RELATED NEWS

You cannot copy contents of this page