ಸೈನಿಕರಲ್ಲಷ್ಟೇ ನಿಕ್ಷಿಪ್ತವಾಗದೆ ರಾಷ್ಟ್ರರಕ್ಷಣೆ ಪ್ರತೀ ಪ್ರಜೆಯ ಆದ್ಯ ಕರ್ತವ್ಯವಾಗಬೇಕು- ಕ್ಯಾಪ್ಟನ್ ಯೋಗೇಂದ್ರ ಸಿಂಗ್

ಉಪ್ಪಳ: ರಾಷ್ಟç ಸಂರಕ್ಷಣೆ ಸೈನಿಕರಲ್ಲಷ್ಟೇ ನಿಕ್ಷಿಪ್ತವಾಗದೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾದಾಗ ಸಂತುಷ್ಟ ರಾಷ್ಟç ನಿರ್ಮಾಣವಾಗುತ್ತದೆ. ದೇಶ ವಿಭಜನೆಯ ಬಳಿಕ ಗಡಿಗಳಲ್ಲಿ ಉಂಟಾಗುವ ವಿಧ್ವಂಸಕ ಕೃತ್ಯ, ಭಯೋತ್ಪಾದನೆ ಮತ್ತು ಧಾಳಿಗಳಿಗೆ ಭಾರತದ ಸೇನೆ ಸಮರ್ಥ ಉತ್ತರಗಳನ್ನು ನೀಡಿದೆ. ಕಾರ್ಗಿಲ್ ವಿಜಯ ಭಾರತದ ಸೇನಾ ವಲಯದಲ್ಲಿ ಅತ್ಯುನ್ನತ ವಿಜಯ ಮಾಲೆ ಎಂದು ಪರಮ ವೀರ ಚಕ್ರ ಸುಬೇದಾರ್ ಮೇಜರ್ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ತಿಳಿಸಿದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ನಿನ್ನೆ ನಡೆದ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
1998ರ ಕಾರ್ಗಿಲ್ ಕದನದಲ್ಲಿ ಘಾಟಕ್ ಕಮಾಂಡರ್ ತಂಡಕ್ಕೆ ಟೈಗರ್ ಹಿಲ್ ಬಂಕರ್‌ಗಳನ್ನು ನಾಶಪಡಿಸಲು ಆದೇಶ ನೀಡಲಾಗಿತ್ತು. ಆ ವೇಳೆ ಕಡಿದಾದ ಹಿಮದ ಬಂಡೆಗಳನ್ನೇರಿ, ಮೇಲಕ್ಕೆ ಹಗ್ಗಗಳನ್ನು ಕಟ್ಟಿ ಮಾರ್ಗಮಾಡಿಕೊಂಡು ಮೇಲೇರಿದ ನೆನಪುಗಳನ್ನು ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ನೆನಪಿಸಿದರು. 15ಕ್ಕೂ ಹೆಚ್ಚು ಗುಂಡುಗಳು ತಾಗಿದ್ದರೂ ಅತಿಯಾದ ರಕ್ತಸ್ರಾವದ ನಡುವೆಯೂ ತೆವಳುತ್ತಾ ಹೋಗಿ ಶತ್ರುಗಳ ಬಂಕರ್ ಗಳನ್ನು ಪುಡಿಗಟ್ಟಿದಾಗಿನ ಘಟನೆಗಳನ್ನು ಸ್ಮರಿಸಿದ ಅವರು, ೧೬ ತಿಂಗಳ ಜೀವನ್ಮರಣ ಹೋರಾಟದ ಬಳಿಕ ಬದುಕಿ ಬಂದಿರುವುದು ಈ ದೇಶಕ್ಕೆ ನೀಡಿದ ಸೇವೆಯ ಹರಕೆಯಿಂದ. ಈ ಮಣ್ಣಿನ ಋಣ ತೀರಿಸುವ ಉತ್ಸಾಹ ನಮ್ಮನ್ನು ಮತ್ತಷ್ಟು ಜೀವನೋತ್ಸಾಹಿಗಳ ನ್ನಾಗಿಸುತ್ತದೆ. ಯಾವ ಹಂತದಲ್ಲೂ ಧೃತಿಗೆಡದೆ ಮುಂದುವರಿಯುವವನು ಗೆಲ್ಲುತ್ತಾನೆ. ರಾಷ್ಟçಸೇವೆಗೆ ಸಮರ್ಪಿತ ಜೀವನಕ್ಕೆ ಅಂತ್ಯವಿಲ್ಲ ಎಂದವರು ಗದ್ಗದಿತರಾಗಿ ತಿಳಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಂಡೆವೂರು ಮಠಾಧೀಶ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಾಜಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಬೆಂಗಳೂರು, ನಿವೃತ್ತ ಸೈನಿಕ ವಲಯ ಕೊಲ್ಯದ ಕ್ಯಾಪ್ಟನ್ ಹರಿಪ್ರಸಾದ್ ಜಿ.ಎಸ್., ಉದುಮ ವಲಯ ಸೈನಿಕ ಸಂಘದ ಹವಾಲ್ದಾರ್ ಪಿಪಿ ಕೃಷ್ಣನ್, ಜಿ.ಎಸ್.ಪ್ರಕಾಶ್, ನಿತ್ಯಾನಂದ ಮಹಾಪೀಠಮ್ ವಿಶ್ವಸ್ಥ ಮೋನಪ್ಪ ಭಂಡಾರಿ ಮಂಗಳೂರು, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ವಿಶ್ವನಾಥನ್ ವೆಂಗರ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೇರಳ ರಾಜ್ಯ ಸೈನಿಕ ಸಂಘ, ನಿವ್ತತ್ತ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ವಿಜಯನ್ ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸನ್ಮಾನ ಪತ್ರ ವಾಚಿಸಿದರು. ವಕೀಲ ಗಂಗಾಧರ ಕೊಂಡೆವೂರು ನಿರೂಪಿಸಿದರು. ಶ್ರೀಸ್ವಾಮೀಜಿಯವರಿಂದ ಅಮರ್ ಜವಾನ್ ಜ್ಯೋತಿ ಪ್ರಜ್ವಲನೆ, ಪುಷ್ಪಾರ್ಚನೆ, ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ನಡೆಯಿತು.

You cannot copy contents of this page