ಕಾಸರಗೋಡು: ಕಾಸರಗೋಡು ಜಿಲ್ಲಾ ಪೊಲೀಸ್ ನೇತೃತ್ವದಲ್ಲಿ ನಡೆದ ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್ ಜಾಗರಣ್ ಇದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನಾಯಮ್ಮಾರಮೂಲೆಯ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕಂಡರಿ ಶಾಲೆಯಲ್ಲಿ ಇಂದು ಬೆಳಿಗ್ಗೆ ರಾಜ್ಯ ಗೃಹ ಮತ್ತು ವಿಜಿಲೆನ್ಸ್ ಖಾತೆ ಸಚಿವ ರಮೇಶ್ ಚೆನ್ನಿತ್ತಲ ನೆರವೇರಿಸಿದರು. ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ಮುಂಚಿತ ವಿದ್ಯಾನಗರದಿಂದ ನಾಯಮ್ಮಾರಮೂಲೆ ಟಿಐಎಚ್ಎಸ್ಎಸ್ಗೆ ಬಹುಜನ ರ್ಯಾಲಿ ನಡೆಯಿತು. ಗೃಹ ಸಚಿವ ರಮೇಶ್ ಚೆನ್ನಿತ್ತಲ,ಸಂಸದ ರಾಜ್ಮೋಹನ್ ಉಣ್ಣಿತ್ತಾನ್,ಶಾಸಕರಾದ ಕಲ್ಲಟ್ರ ಮಾಹಿನ್, ಎಕೆಎಂ ಅಶ್ರಫ್,ಸಂದೀಪ ವಾರ್ಯರ್, ಕೆ. ನೀಲಕಂಠನ್ ಸಹಿತ ಹಲವರು ಭಾಗವಹಿಸಿದರು.
ತಿರುವನಂತಪುರದಿಂದ ಇಂದು ಬೆಳಿಗ್ಗೆ ರೈಲಿನಲ್ಲಿ ಕಾಸರಗೋಡಿಗೆ ಆಗಮಿಸಿದ ಸಚಿವರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ನೇತೃತ್ವದಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ಸೇರಿದಂತೆ ಹಲವು ನೇತಾರರು ಭಾಗವಹಿಸಿ ದರು. ನಂತರ ನಾಯಮ್ಮಾರ ಮೂಲೆಯಲ್ಲಿ ಆಪರೇಶನ್ ತೂಫಾನ್ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು.
ಬಳಿಕ ಕಾಸರಗೋಡು ಪಿಲಿಕುಂಜೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಬ್ಲೋಕ್ ಕಟ್ಟಡದ ಉದ್ಘಾಟನೆಯನ್ನು ಸಚಿವ ನೆರವೇರಿಸಿದರು. ಪಿಲಿಕುಂಜೆ ಯಲ್ಲಿರುವ ಕಾಸರಗೋಡು ಮುನಿಸಿಫಲ್ ಕಾನ್ಫರೆನ್ಸ್ ಹಾಲ್ನಲ್ಲಿ ನಡೆಯಲಿರುವ ಮಾಜಿ ಸಚಿವ ದಿ| ಚೆರ್ಕಳಂ ಅಬ್ದುಲ್ಲರ ಸಂಸ್ಮರಣಾ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿದರು. ಅನಂತರ ಇತ್ತೀಚೆಗೆ ನಿಧನರಾದ ಜಿಲ್ಲಾ ಕಾಂಗ್ರೆಸ್ ಘಟಕದ ಮಾಜಿ ಕೋಶಾಧಿಕಾರಿ ಕೆ.ಮೊಯ್ದೀನ್ ಕುಟ್ಟಿ ಹಾಜಿಯವರ ಮನೆಗೆ ಸಚಿವರು ಭೇಟಿ ನೀಡಿ ಕುಟುಂಬವನ್ನು ಸಂತೈಸುವರು.






