ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬಂಗ್ರ ಮಂಜೇಶ್ವರ ರಸ್ತೆಯ ಕಟ್ಟೆಬಜಾರ್ ತಿರುವು ವಾಹನ ಸವಾರರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ತಿರುವಿನ ಇಕ್ಕೆಡೆಗಳಲ್ಲಿ ರಸ್ತೆಗೆ ತಾಗಿಕೊಂಡು ತೆರೆದ ಸ್ಥಿತಿಯಲ್ಲಿರುವ ಚರಂಡಿ ವಾಹನ ಸವಾರರಲ್ಲಿ ಆತಂಕ ವನ್ನುಂಟುಮಾಡಿದೆ. ಮಂಜೇಶ್ವರ ಭಾಗದಿಂದ ಹೊಸಂಗಡಿ ಕಡೆಗೆ ಸಂಚರಿಸುವಾಗ ತಿರುವಿನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಚರಂಡಿಗೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಕೆಲವರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಈ ಪರಿಸರದಲ್ಲಿ ಚರಂಡಿಯಲ್ಲಿ ಗಿಡ, ಪೊದೆಗಳು ತುಂಬಿ ಚರಂಡಿ ಗಮನಕ್ಕೆ ಬಾರದೆ ಇನ್ನಷ್ಟು ಅಪಾಯಕ್ಕೆ ಕಾರಣವಾಗು ತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ತಿರುವು ಇಕ್ಕಟ್ಟಿನಿಂದ ಕೂಡಿದ್ದು, ಬಸ್ ಸಹಿತ ದೊಡ್ಡ ವಾಹನಗಳು, ಸಂಚರಿಸುವ ವೇಳೆ ತ್ರಿಚಕ್ರ, ದ್ವಿಚಕ್ರ ಸಹಿತ ಇತರ ವಾಹನ ಸಂಚಾರಕ್ಕೆ ಹರಸಾಹಸಪಡಬೇ ಕಾಗುತ್ತಿದೆ. ಪಾದಚಾರಿಗಳಿಗೂ ಅಪಾಯದ ಭೀತಿ ಉಂಟಾಗಿದೆ. ಈ ತಿರುವುನಲ್ಲಿ ಇತ್ತೀಚೆಗೆ ಕಾರು ನಿಯಂತ್ರಣ ತಪ್ಪಿ ಈ ಪರಿಸರದ ಟೈಲರ್ ಅಂಗಡಿಗೆ ಡಿಕ್ಕಿಹೊಡೆದು ಹಾನಿ ಉಂಟಾಗಿ ಅಂಗಡಿ ಮಾಲಕ ಅಪಾಯದಿಂದ ಪಾರಾದ ಘಟನೆ ನಡೆದಿತ್ತು. ಈ ತಿರುವಿನಲ್ಲಿರುವ ಚರಂಡಿಗೆ ಸ್ಲಾಬ್ ಹಾಕಿ ನಿರ್ಮಿಸಿ ಭದ್ರತೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.





