ಪೈವಳಿಕೆ: ಕಟೀಲು, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಆರು ದಶಕಗಳ ಕಾಲ ಕಲಾವಿಧರಾಗಿ ತಿರುಗಾಟ ನಡೆಸಿದ್ದ ಮುಳಿಗದ್ದೆ ತಾಳ್ತಜೆ ನಿವಾಸಿ ಸುಂದರ ಕುಲಾಲ್ (79) ನಿಧನ ಹೊಂದಿದರು. ಬೇಡಗುಡ್ಡೆಯ ಲ್ಲಿರುವ ಸ್ವ-ಗೃಹದಲ್ಲಿ ನಿನ್ನೆ ನಿಧನ ಸಂಭವಿಸಿದೆ. ಇವರು ಯಕ್ಷಗಾನ ಮಾತ್ರ ವಲ್ಲದೆ, ಕೋಟಿಚೆನ್ನಯ, ಸಾವಿರೊ ಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ತಮ್ಮ ಮಾವನವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಸಿಸಿ ಧರ್ಮಸ್ಥಳ ಮೇಳ ಸೇರಿಕೊಂಡು ಕೋಡಂಗಿ ವೇಷದಿಂದ ಯಕ್ಷವೃತ್ತಿ ಆರಂಭಿಸಿದ್ದಾರೆ. ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನು ಮಾಡಿದ ಇವರು ಮುಲ್ಕಿ, ಸುರತ್ಕಲ್, ಕುಂಬಳೆ, ಕದ್ರಿ, ಬಪ್ಪನಾಡು ಮೇಳಗಳಲ್ಲಿ ವೃತ್ತಿ ಬದುಕು ಮುಂದುವರಿಸಿ ಬಳಿಕ ಕಟೀಲು ಮೇಳಕ್ಕೆ ಸೇರಿ ನಿವೃತ್ತರಾದರು. ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡ ಎಂ.ಟಿ.ಎಸ್ ಕುಲಾಲ್ ರಾಜವೇಷ, ಪೋಷಕ ವೇಷ, ಸ್ತ್ರೀವೇಷ, ಹಾಸ್ಯ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಭಾಗವತಿಕೆಯಲ್ಲೂ ಪರಿಣತಿ ಹೊಂದಿದ್ದರು.
ಕಾರ್ತವೀರ್ಯ, ವನಪಾಲಕ, ರಾವಣ, ರೇಣುಕೆ, ಜಮದಗ್ನಿ, ಭಾರ್ಗವ ಮೊದಲಾದ ಪಾತ್ರಗಳಲ್ಲಿ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದರು. ಮೃತರು ಪತ್ನಿ ಸವಿತಾ, ಮಕ್ಕಳಾದ ದೇವಿಪ್ರಸಾದ್, ಗುರುಪ್ರಸನ್ನ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






