ಕಾಸರಗೋಡು: ಮಳೆಗಾಲ ಸಮು ದ್ರದಲ್ಲಿ ಮತ್ಸ್ಯಗಳ ಸಂತಾನೋತ್ಪತ್ತಿಯ ಋತುವಾಗಿದ್ದು, ಆ ಹಿನ್ನೆಲೆಯಲ್ಲಿ ಇಂತಹ ವೇಳೆಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವ ಪ್ರತಿವರ್ಷದ ಕ್ರಮವೆಂಬಂತೆ ಕೇರಳದಲ್ಲಿ ಕಳೆದ ೫೨ ದಿನಗಳ ಹಿಂದೆ ಮೀನು ಗಾರಿಕೆ (ಟ್ರೋಲಿಂಗ್)ಗೆ ಹೇರಲಾಗಿದ್ದ ಟ್ರೋಲಿಂಗ್ ನಿಷೇಧಕ್ಕೆ ಇಂದು ರಾತ್ರಿ 12 ಗಂಟೆಗೆ ತೆರೆ ಬೀಳಲಿದೆ. ಇದರಿಂ ದಾಗಿ ಬೆಸ್ತರು ಭಾರೀ ಮತ್ಸ್ಯಸಂಪತ್ತಿನ ನಿರೀಕ್ಷೆಯೊಂದಿಗೆ ಇಂದು ತಡರಾತ್ರಿಯಿಂದ ಮತ್ತೆ ಯಾಂತ್ರೀಕೃತ ದೋಣಿಗಳೊಂದಿಗೆ ಸಮುದ್ರಕ್ಕಿಳಿಯಲಿ ದ್ದಾರೆ. ಟ್ರೋಲಿಂಗ್ ನಿಷೇಧ ಅವಧಿ ಯಲ್ಲಿ ಬೆಸ್ತರು ತಮ್ಮ ದೋಣಿ ಮತ್ತು ಬಲೆಗಳ ದುರಸ್ತಿ ಕ್ರಮಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಟ್ರೋಲಿಂಗ್ ನಿಷೇಧ ನಿಗದಿತ ಅವಧಿ ಪೂರ್ಣ ಗೊಂಡ ಬೆನ್ನಲ್ಲೇ ಕೇರಳ ಮಾತ್ರವಲ್ಲ, ಹೊರ ರಾಜ್ಯಗಳ ಮೀನುಗಾರರೂ ಕೇರಳದ ಸಮುದ್ರವ್ಯಾಪ್ತಿಗೆ ಸೇರಿದ ಆಳ ಸಮುದ್ರದಲ್ಲಿ ಮತ್ತೆ ಮೀನುಗಾರಿಕೆ ಆರಂಭಿಸುವ ತವಕದಲ್ಲಿ ತೊಡಗಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು ಇದರಿಂದಾಗಿ ಬಿರುಗಾಳಿಯ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲ ಆ ಬಗ್ಗೆ ಮೀನುಗಾರಿಕೆಗೆ ಹೋಗುವ ಬೆಸ್ತರಿಗೂ ಭಾರೀ ಮುನ್ನೆಚ್ಚರಿಕೆ ನೀಡಿದೆ. ಇದು ಮೀನುಗಾರಿಕೆ ಮೇಲೆ ಪರಿಣಾಮ ಬೀರಲಿದೆಯೋ ಎಂಬ ಆತಂಕವೂ ಬೆಸ್ತರನ್ನು ಕಾಡತೊಡಗಿದೆ.
ಟ್ರೋಲಿಂಗ್ ನಿಷೇಧದ ಅವಧಿ ಇಂದು ರಾತ್ರಿ ಕೊನೆಗೊಳ್ಳುವುದರ ಜತೆಗೆ ಮೀನುಗಾರಿಕಾ ಬಂದರುಗಳು ಮತ್ತು ಮೀನು ಮಾರ್ಕೆಟ್‌ಗಳು ಮತ್ತೆ ಸಕ್ರಿಯಗೊಳ್ಳಲಿದೆ. ಟ್ರೋಲಿಂಗ್ ಅವಧಿಯಲ್ಲಿ ಮೀನು ಲಭಿಸದ ವೇಳೆಅದನ್ನು ಸದುಪಯೋಗಗೊಳಿಸಿ ಕೋಳಿ ಮತ್ತು ಕೋಳಿ ಮೊಟ್ಟೆಯ ಬೆಲೆಗಳನ್ನು ಏರಿಸಲಾಗಿತ್ತು. ಟ್ರೋಲಿಂಗ್ ನಿಷೇಧ ಕೊನೆಗೊಳ್ಳುವ ಮೂಲಕ ಕೋಳಿ ಮತ್ತು ಕೋಳಿ ಮೊಟ್ಟೆಗಳ ಬೆಲೆಯೇರಿಕೆ ಇಳಿಯಲು ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಜತೆಗೆ ಇನ್ನೊಂದೆಡೆ ದುಬಾರಿಯಾಗಿದ್ದ ಮೀನಿನ ಬೆಲೆಯಲ್ಲೂ ಇಳಿಕೆ ಉಂಟಾಗುವ ನಿರೀಕ್ಷೆಯೂ ಇದೆ.






