ಉಪ್ಪಳ: ಮನೆಯಿಂದ ಮಾರಕ ಮಾದಕವಸ್ತುವಾದ 3.407 ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣ ದಲ್ಲಿ ತಲೆಮರೆಸಿಕೊಂಡಿದ್ದ 9ನೇ ಆರೋಪಿಯನ್ನು ಬಂಧಿಸಲಾಗಿದೆ. ಕಾಸರಗೋಡು ತಳಂಗರೆ ಬಾಂಗೋಡ್‌ನ ಶಬೀಬಬಾಗ್ ಹೌಸ್‌ನ ಮುಹಮ್ಮದ್ ಲಿಸಾನ್ ಅಲಿ (32) ಎಂಬಾತನನ್ನು ಕಾಸರಗೋಡು ಎಎಸ್‌ಪಿ ಅಶೋಕ್ ಅಚ್ಯುತನ್‌ರ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಕೆ. ಜಿಜೀಶ್ ಹಾಗೂ ತಂಡ ಬಂಧಿಸಿದೆ. ಆರೋಪಿ ಕರ್ನಾಟಕದ ಮಡಿಕೇರಿ ಬಳಿಯ ಕುಶಾಲನಗರದಲ್ಲಿ ತಲೆಮರೆಸಿ ಕೊಂಡು ವಾಸಿಸುತ್ತಿದ್ದನು. ಅಲ್ಲಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2024 ಸೆಪ್ಟಂಬರ್ 20ರಂದು ಮಾದಕವಸ್ತುಗಳನ್ನು ವಶಪಡಿಸಿ ಕೊಂಡ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಜೆ. ಟೋಲ್ಸನ್‌ರ ನೇತೃತ್ವದಲ್ಲಿ ಅಂದು ಸಂಜೆ 3.45ರ ವೇಳೆ ಉಪ್ಪಳ ಪತ್ವಾಡಿಯ ಅಸ್ಕರ್ ಅಲಿ (28) ಎಂಬಾತನ ಮನೆಗೆ ನಡೆಸಿದ ದಾಳಿ ವೇಳೆ ಮಾದಕವಸ್ತು ಪತ್ತೆಯಾಗಿದೆ. ಈ ಮನೆಗೆ ಹಗಲು-ರಾತ್ರಿ ವಾಹನಗಳಲ್ಲಿ ಅಪರಿಚಿತರ ಸಹಿತ ಹಲವರು ಬಂದು ಹೋಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ನಿಗಾ ಇರಿಸಿದ ಬಳಿಕ ಪೊಲೀಸ್ ತಂಡ ಅಸ್ಕರ್ ಅಲಿಯ ಮನೆಗೆ ದಾಳಿ ನಡೆಸಿತ್ತು. ಮಾದಕವಸ್ತು ವ್ಯವಹಾರಕ್ಕೆ ಹಣ ಒದಗಿಸಿರುವುದು ಈಗ ಸೆರೆಗೀಡಾದ ಮುಹಮ್ಮದ್ ಲಿಸಾನ್ ಅಲಿ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ೮ ಮಂದಿಯನ್ನು ಬಂಧಿಸಲಾಗಿತ್ತು.






