ಉಪ್ಪಳ: ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಬಿಜೆಪಿ ಕಾರ್ಯಕರ್ತ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉಪ್ಪಳ ಕೊಂಡೆವೂರು ನಿವಾಸಿ ದಿ| ನೇಮಿ ರಾಜ್ ಶೆಟ್ಟಿಯವರ ಪುತ್ರ ಸಂದೀಪ್ ಶೆಟ್ಟಿ ಯಾನೆ ಅಣ್ಣು (44) ಎಂಬವರ ಮೃತದೇಹ ಮನೆ ಸಮೀಪದ ತೋಟ ದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ಸಂದೀಪ್ ಶೆಟ್ಟಿ ಉಪ್ಪಳ ಶಾರದಾನಗರ ದಲ್ಲಿರುವ ತಂಪುಪಾನೀಯ ತಯಾರಿ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದರು. ಎಂದಿನಂತೆ ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದು ತಿಳಿಸಿ ಇವರು ಮನೆಯಿಂದ ಹೊರಟಿದ್ದರು. ಮಧ್ಯಾಹ್ನ ವರೆಗೆ ಇವರನ್ನು ಕಾಣದ ಹಿನ್ನೆಲೆಯಲ್ಲಿ ಸ್ನೇಹಿತರು ಸಂದೀಪ್ ಶೆಟ್ಟಿಯವರಿಗೆ ಫೋನ್ ಕರೆ ಮಾಡಿದ್ದು ಈ ವೇಳೆ ಯಾವುದೇ ಪ್ರತಿಕ್ರಿಯೆ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ನೇಹಿತರು ಹಾಗೂ ನಾಗರಿಕರು ಶೋಧ ನಡೆಸುತ್ತಿದ್ದಂತೆ ಸಂದೀಪ್ ಶೆಟ್ಟಿಯವರ ಅಂಗಿ ಸಂಜೆ ೬.೩೦ರ ವೇಳೆ ಕೆರೆ ಬದಿಯಲ್ಲಿ ಪತ್ತೆಯಾಗಿದೆ. ಕೆರೆಗೆ ಬಿದ್ದಿರಬಹು ದೆಂಬ ಸಂಶಯದ ಮೇರೆಗೆ ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ನಡೆಸಿದ ಶೋಧ ವೇಳೆ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
ಇದೇ ಕೆರೆಯಿಂದ ಸಂದೀಪ್ ಶೆಟ್ಟಿಯವರ ಮನೆಗೆ ನೀರು ಉಪಯೋಗಿಸುತ್ತಿದ್ದು, ಇದಕ್ಕಾಗಿ ಮೋ ಟಾರು ಅಳಡಿಸಲಾಗಿದೆ. ಮೋಟಾರ್ನ ಫುಟ್ವಾಲ್ವ್ಗೆ ಹಾನಿಯುಂಟಾಗಿತ್ತೆಂದು ಹೇಳಲಾಗುತ್ತಿದೆ. ಅದನ್ನು ದುರಸ್ತಿ ನಡೆಸುತ್ತಿದ್ದಾಗ ಆಯತಪ್ಪಿ ಸಂದೀಪ್ ಶೆಟ್ಟಿ ಕೆರೆಗೆ ಬಿದ್ದಿರಬಹುದೆಂದು ಸಂಶಯಿಸಲಾಗುತ್ತಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದೆ.
ಮೃತರು ತಾಯಿ ನಳಿನಿ, ಸಹೋದರರಾದ ಸಂದೇಶ್ ಶೆಟ್ಟಿ, ಸಂಪತ್ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಂದೀಪ್ ಶೆಟ್ಟಿಯವರ ನಿಧನಕ್ಕೆ ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಮುಳಿಂಜ ಹಾಗೂ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಮೂರನೇ ವಾರ್ಡ್ ಸಮಿತಿ ಸಂತಾಪ ಸೂಚಿಸಿದೆ.






