ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದ ಸೂತ್ರಧಾರ ಸೆರೆಯಾಗಿದ್ದಾನೆ. ಎರ್ನಾಕುಳಂ ನಿವಾಸಿಯಾದ ಆಬಿದ್ ಎಂಬಾತ ಸೆರೆಯಾದ ವ್ಯಕ್ತಿ. ಈತನನ್ನು ಚಂದೇರಕ್ಕೆ ತಲುಪಿಸಿ ಬಂಧನ ದಾಖಲಿಸಲಾಗುವುದು. ಎರ್ನಾಕುಳಂ, ಪೆರುಂಬಾವೂರ್ ಅರಕಪ್ಪೊಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೈನ್ (28), ಪಿ.ಎ. ಅಬ್ಬಾಸ್ (50) ಎಂಬಿವರನ್ನು ನಿನ್ನೆ ಬೆಳಿಗ್ಗೆ ಬಂಧಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಡ್ಯಾನ್ಸಾಪ್ ತಂಡ ಹಾಗೂ ಚಂದೇರ ಎಸ್‌ಐ ಮನು ಪಿ. ಚೆರಿಯಾನ್ ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ನಡೆಸಿದ ತಪಾಸಣೆಯಲ್ಲಿ ಮಾದಕ ಪದಾರ್ಥ ಸಾಗಾಟ ತಂಡ ಸೆರೆಯಾಗಿತ್ತು. ಕಾಸರಗೋಡಿಗೆ ಸಾಗಿಸುತ್ತಿದ್ದ ಮಾದಕ ಪದಾರ್ಥವಿದೆಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಮಾದಕ ಪದಾರ್ಥ ಸಾಗಾಟದ ಸೂತ್ರಧಾರ ಆಬಿದ್ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಬಳಿಕ ಎರ್ನಾಕುಳಂ ಪೊಲೀಸರ ಸಹಾಯದೊಂದಿಗೆ ಆಬಿದ್‌ನನ್ನು ಕಸ್ಟಡಿಗೆ ತೆಗೆಯಲಾಗಿದೆ.






