ಕಾಸರಗೋಡು: ಸಹೋದರಿ ನೇಣುಬಿಗಿದು ಸಾವಿಗೆ ಶರಣಾದ ಎರಡು ತಿಂಗಳಲ್ಲೇ ಸಹೋದರನೂ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೇಕಲ ಪಳ್ಳಿಕ್ಕರೆ ಮುಕ್ಕೂಡ್ ನಿವಾಸಿಯಾದ ಮಹೇಶ್ ಎಂಬವರ ಪುತ್ರ ಅರ್ಜುನ್ ಮಹೇಶ್ (24)ರ ಮೃತದೇಹ ನಿನ್ನೆ ಮಧ್ಯಾಹ್ನ ಮಂಗಳೂರಿನ ಲಾಡ್ಜ್ನಲ್ಲಿ ಪತ್ತೆಯಾಗಿದೆ. ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರ್ ಎಂಬಲ್ಲಿನ ಲಾಡ್ಜ್ನಲ್ಲಿ ಅರ್ಜುನ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅರ್ಜುನ್ ಮಹೇಶ್ರ ಸಹೋದರಿ ಐಜ ಆರ್ ಮಹೇಶ್ ಜೂನ್ ಮೊದಲ ವಾರ ಪಾಲಾದ ಹಾಸ್ಟೆಲ್ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಳು. ಕೂಡಲೇ ಆಕೆಯನ್ನು ಪಾಲಾ, ಅರುಣಾಪುರದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಚಿಕಿತ್ಸೆ ಮಧ್ಯೆ ಆಕೆ ಮೃತಪಟ್ಟಿದ್ದರು. ಜೂನ್ 21ರಂದು ನಡೆದ ನೀಟ್ ಪುನರ್ ಪರೀಕ್ಷೆಯ ಸಿದ್ಧತೆಯಲ್ಲಿದ್ದಾಗಲೇ ಐಜ ಸಾವಿಗೆ ಶರಣಾಗಿದ್ದಳು. ಸಹೋದರಿ ಮೃತಪಟ್ಟ ಸಂದರ್ಭದಲ್ಲಿ ಊರಿನಲ್ಲಿದ್ದ ಅರ್ಜುನ್ ಬಳಿಕ ಗಲ್ಫ್ಗೆ ತೆರಳಿದ್ದರು. ಮೊನ್ನೆ ಊರಿಗೆ ಹೋಗುವುದಾಗಿ ಅರ್ಜುನ್ ಅಲ್ಲಿನ ಸ್ನೇಹಿತರಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಂತೆ ಮಂಗಳೂರಿಗಿರುವ ವಿಮಾನದಲ್ಲಿ ಅರ್ಜುನ್ ಪ್ರಯಾಣಿಸಿ ದ್ದರು. ಮಂಗಳೂರಿಗೆ ತಲುಪಿದ ಬಳಿಕ ತಾಯಿಗೆ ಫೋನ್ ಕರೆ ಮಾಡಿ ಅರ್ಜುನ್ ಮಾತನಾಡಿದ್ದರು. ಆದರೆ ಊರಿಗೆ ಮರಳಿದ ವಿಷಯವನ್ನು ಅರ್ಜುನ್ ತಿಳಿಸಿರಲಿಲ್ಲವೆನ್ನಲಾಗುತ್ತಿದೆ. ಮೊನ್ನೆ ಮಧ್ಯಾಹ್ನ ಬಳಿಕ ಸ್ನೇಹಿತರು ಊರಿಗೆ ಕರೆಮಾಡಿದಾಗ ಅರ್ಜುನ್ ಊರಿಗೆ ತಲುಪಿಲ್ಲವೆಂಬ ಮಾಹಿತಿ ತಿಳಿದುಬಂದಿತ್ತು. ಇದರಿಂದ ಮನೆಯವರು ಅರ್ಜುನ್ಗೆ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ. ಅನಂತರ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂತು. ಇದರಿಂದ ಸಂಶಯಗೊಂಡ ಸಂಬಂಧಿಕರು ಹಾಗೂ ನಾಗರಿಕರು ಕೂಡಲೇ ಮಂಗಳೂರಿಗೆ ತಲುಪಿ ವಿವಿಧ ಲಾಡ್ಜ್ಗಳಲ್ಲಿ ಹುಡುಕಾಡಿದರೂ ಅರ್ಜುನ್ನನ್ನು ಪತ್ತೆಹಚ್ಚಲಾಗಲಿಲ್ಲ. ಈ ಮಧ್ಯೆ ನಿನ್ನೆ ಅಪರಾಹ್ನ ಮರವೂರ್ ಎಂಬಲ್ಲಿನ ಲಾಡ್ಜ್ನಲ್ಲಿ ಅರ್ಜುನ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅರ್ಜುನ್ ಮಹೇಶ್ ತನ್ನ ಹೆಸರನ್ನು ಅರ್ಜುನ್ ರಾಧಿಕಾ ಎಂಬುದಾಗಿ ಲಾಡ್ಜ್ನಲ್ಲಿ ವಿಳಾಸ ನೀಡಿದ್ದರೆನ್ನಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






