ತೃಶೂರು: ತೋಳೂರುನಲ್ಲಿ ಬಟ್ಟೆ ವ್ಯಾಪಾರಿಯ ಮನೆಯಿಂದ ೫೦ ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಪೀಚಿ ಪಾಣಂಗೇರಿ ಪುಳಿಕ್ಕಲ್ ಸಂತೋಷ್ ಯಾನೆ ಕಲ್ಕಿ (44), ಮಣಲೂರ್ ಎಙಂಡಿ ನಿವಾಸಿ ಸಜಿತ (46), ಕೋತಪರಂಬ್ ನಿವಾಸಿ ಅಖಿಲ (35) ಎಂಬಿವರು ಸೆರೆಯಾದವರು. ಈ ತಿಂಗಳ ೨೦ರಂದು ಪರಪ್ಪೂರ್ ಸೆಂಟರ್ನಲ್ಲಿ ಬಟ್ಟೆ ಅಂಗಡಿ ನಡೆಸುವ ನಾಲಗತ್ ಸಕೀರ್ನ ಮನೆಯಿಂದ ಕಳವು ನಡೆಸಲಾಗಿತ್ತು. ಓಣಂ ಹಬ್ಬವಾದ ಕಾರಣ ಅಂಗಡಿ ಮುಚ್ಚಿ ತಡವಾಗಿ ಮನೆಗೆ ತಲುಪಿದಾಗ ಕಳವು ಗೈದಿರುವುದು ತಿಳಿದು ಬಂದಿದೆ. ಪುತ್ರಿಯ ವಿವಾಹ ಅಗತ್ಯಗಳಿಗೆ ಬೇಕಾಗಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವುಗೈಯ್ಯಲಾಗಿದೆ. ಬಳಿಕ ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳೀಯ ಸಿಸಿಟಿವಿ ದೃಶ್ಯ ಸಹಿತ ಪರಿಶೀಲಿಸಿ ನಡೆಸಿದ ತನಿಖೆಯಲ್ಲಿ ತಂಡದ ಸೂತ್ರಧಾರನಾದ ಸಂತೋಷ್ನನ್ನು ವಲಪ್ಪಾಡ್ ಬೀಚ್ ಪರಿಸರದಿಂದ ಸೆರೆ ಹಿಡಿದಿದ್ದರು.
ಈತ ಜಿಲ್ಲೆಯ ಒಳಗೆ ಹಾಗೂ ಹೊರಗೆ ಹಲವಾರು ಕಳವು ಪ್ರಕರಣ ಗಳಲ್ಲಿ ಆರೋಪಿಯಾಗಿದ್ದಾನೆಂದು, ಕರ್ನಾಟಕದಲ್ಲಿ ನಡೆದ ಚಿನ್ನಾಭರಣ ಕೊಳ್ಳೆ ಪ್ರಕರಣದಲ್ಲೂ ಈತನಿಗೆ ನಂಟು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗೆ ಸಹಾಯಗೈದ ಆರೋಪದಂತೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಇನ್ನೂ ಓರ್ವನನ್ನು ಸೆರೆ ಹಿಡಿಯಲು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.







