ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಬೀದಿ ದೀಪ ಸಮಸ್ಯೆ, ಶುಚಿತ್ವ ಕೊರತೆ ಮುಂತಾದವುಗಳನ್ನು ತುರ್ತಾಗಿ ಸರಿಪಡಿಸುವಂತೆ ಆಗ್ರಹಿಸಿ ನಗರಸಭೆಯ ಬಿಜೆಪಿ ಕೌನ್ಸಿಲರ್ಗಳು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿಯವರಿಗೆ ಮನವಿ ಸಲ್ಲಿಸಿದ್ದಾರೆ. ನಗರದಲ್ಲಿ ಸಮರ್ಪಕ ಒಳ ಚರಂಡಿ, ತ್ಯಾಜ್ಯ ಸಂಸ್ಕರಣಾ ಘಟಕಗಳಿಲ್ಲದ ಕಾರಣ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರಕ್ಕೆ ರಂಭೀರ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಾಣಿಜ್ಯ ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್ಗಳ ಕೊಳಚೆ ನೀರು ನೇರವಾಗಿ ತೆರೆದ ಚರಂಡಿಗಳಿಗೆ ಹರಿಯುತ್ತಿದ್ದು, ಇದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಗರ, ಕೊರಕ್ಕೋಡು, ತಾಯಲಂಗಾಡಿ, ಕರಂದಕ್ಕಾಡು, ಬೀರಂತಬೈಲು, ತಾಳಿಪಡ್ಪು, ಕಲ್ಮಾಡಿ ತೋಡಿನಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಇದರಿಂದ ಕುಡಿಯುವ ನೀರು ಮೂಲಗಳು ಮಲಿನಗೊಳ್ಳುತ್ತಿವೆ. ತ್ಸುನಾಮಿ ಪುನರ್ವಸತಿ ಕಾಲನಿಯ ಸೆಪ್ಟಿಕ್ ಟ್ಯಾಂಕ್ಗಳು ಉಕ್ಕಿ ಹರಿದು ಸಾಂಕ್ರಾಮಿಕ ರೋಗ ಭೀತಿ ಉಂಟಾ ಗಿದೆ. ಬೀದಿ ದೀಪಗಳು ಉರಿಯದೆ ನಗರದಲ್ಲಿ ಸಮಾಜವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಹೊಸ ಬಸ್ ನಿಲ್ದಾಣದ ಪಾರ್ಕಿಂಗ್ಪ್ರದೇಶ ದಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ಬೆಳೆಯುತ್ತಿರುವ ನಗರದ ಸುಸ್ತಿರ ಅಭಿವೃದ್ಧಿ ಹಾಗೂ ನಾಗರಿಕರ ಹಿತದೃಷ್ಟಿ ಯಿಂದ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಸಮಗ್ರ ಯೋಜನೆಯನ್ನು ಜ್ಯಾರಿಗೊಳಿಸಬೇಕೆಂದು ಕೌನ್ಸಿಲರ್ಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.






