ಕಾಸರಗೋಡು: ಬೀದಿ ದೀಪ ದುರಸ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮ್ಯಾನ್ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ತಲಪಾಡಿ – ಚೆಂಗಳ ರೀಚ್‌ಗೊಳಪಟ್ಟ ಕಾಸರಗೋಡು ಕರಂದಕ್ಕಾಡ್‌ಗೆ ಸಮೀಪದ 13 ಮೀಟರ್ ಎತ್ತರದಲ್ಲಿರುವ ವಿದ್ಯುತ್ ಕಂಬದ ಬೀದಿ ದೀಪದ ದುರಸ್ತಿ ಕೆಲಸ ನಿರ್ವಹಿಸಲೆಂದು ಗುತ್ತಿಗೆ ಕಾರ್ಮಿಕರಾದ ಅಶೋಕ್ (50) ಮತ್ತು ಶಿವಪ್ರಸಾದ್ (೪೦) ಹೈಡ್ರೋಲಿಕ್ಸ್ ವ್ಯವಸ್ಥೆಯಲ್ಲಿ ಕಾರ್ಯವೆಸಗುತ್ತಿರುವ ಮ್ಯಾನ್ ಲಿಫ್ಟ್‌ಗೇರಿ ದುರಸ್ತಿ ಕೆಲಸ ನಿರ್ವಹಿಸಿದ ಬಳಿಕ ಕೆಳಗೆ ಇಳಿಯುವ ಸಂದರ್ಭದಲ್ಲಿ ಲಿಫ್ಟ್ ಕೈಕೊಟ್ಟು ಅಲ್ಲೇ ನಿಂತಿದೆ. ಅದರಲ್ಲಿದ್ದ ಕಾರ್ಮಿಕರು ಒಂದು ಗಂಟೆ ತನಕ ಲಿಫ್ಟ್‌ನಲ್ಲೇ ಸಿಲುಕಿಕೊಳ್ಳುವಂತಾಯಿತು. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಸ್ಟೇಷನ್ ಹೌಸ್ ಆಫೀಸರ್ ಡಾ. ಕೆ. ಹರ್ಷಾರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ತಮ್ಮ ಏಣಿ ಉಪಯೋಗಿಸಿ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಆ ವೇಳೆ ಕಾರ್ಮಿಕರಿಬ್ಬರು ದೈಹಿಕವಾಗಿ ತೀವ್ರ ಅಸ್ವಸ್ಥಗೊಂಡಿದ್ದರು. ಮ್ಯಾನ್ ಲಿಫ್ಟ್‌ನ ಅಡಿ ಭಾಗದ ಫೌಂಡೇಶನ್‌ನ ಬೋಲ್ಟ್ ಕೆಟ್ಟುಹೋಗಿರುವುದೇ ಅದು ಕಾರ್ಯರಹಿತಗೊಳ್ಳಲು ಕಾರಣವೆಂದು ಅಗ್ನಿಶಾಮಕ ದಳ ತಿಳಿಸಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಕೆ. ರಂಜಿತ್, ವಿ.ಎನ್. ಗೋಕುಲ್ ಕೃಷ್ಣನ್, ಮುಹಮ್ಮದ್ ಸಿರಾಜುದ್ದೀನ್, ಕೆ.ಬಿ. ಜಿಜೋ, ಬಿ.ಎಸ್. ಜ್ಯುಬಿನ್, ಇ. ಪ್ರಸೀದ್, ವಿ.ಕೆ. ಶೈಜು ಎಂಬವರು ಪಾಲ್ಗೊಡಿದ್ದರು.






