ಬ್ರಹ್ಮಾಂಡದಲ್ಲಿ ಹೊಸ ಕಣ್ಣು: ಜಿಎಸ್‌ಎಲ್‌ವಿ-ಎಫ್-17 ಉಪಗ್ರಹ ಯಶಸ್ವಿ ಕಕ್ಷೆಗೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ದಿಂದ  ಜಿಎಸ್‌ಎಲ್‌ವಿ-ಎಫ್-17 ಆಕಾಶ ನೌಕೆಯು ದೇಶದ ಅತ್ಯಂತ ಭಾರವಾದ ಭೂ ಪರಿವೀಕ್ಷಣಾ ಉಪಗ್ರಹವಾದ ಇಒಎಸ್-05 ಉಪಗ್ರಹವನ್ನು ಪ್ರತಿಕೂಲ ಹವಾಮಾನವನ್ನು ಭೇದಿಸಿ ಇಂದು ಮುಂಜಾನೆ ಜಿಯೋ ಸಿಮ್ ಕ್ರೋನಸ್ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದೆ. ಶ್ರೀಹರಿಕೋಟಾದಲ್ಲಿ ನಡೆದ 107ನೇ ಉಡಾವಣೆ ಇದಾಗಿದ್ದು ಜಿಎಸ್‌ಎಲ್‌ವಿ ನೌಕೆಯ 19ನೇ ಸಾಹಸವೂ  ಇದಾಗಿದೆ. ಈ ಯಶಸ್ವಿಯೊಂದಿಗೆ ಬಾಹ್ಯಾಕಾಶ ರಂಗದಲ್ಲಿ ಭಾರತದ ಸಾಮರ್ಥ್ಯವನ್ನು ಉನ್ನತ ಹಂತಕ್ಕೇರಿಸಿದೆ. ಇದು ಬ್ರಹ್ಮಾಂಡದಲ್ಲಿ ಹೊಸ ಕಣ್ಣಿರಿಸುವ ಭಾರತದ ಒಂದುಹೊಸ ಹೆಜ್ಜೆಯಾಗಿದೆ.  51.7 ಮೀಟರ್ ಎತ್ತರದ ಜಿಎಸ್‌ಎಲ್‌ವಿ ರಾಕೆಟ್ ಇಂದು ಮುಂಜಾನೆ 2.55ಕ್ಕೆ  ಬೆಂಕಿ ಜ್ವಾಲೆ ಹೊರಸೂಸುತ್ತಾ ಗಗನಕ್ಕೆ ಚಿಮ್ಮಿದೆ. ಸುಮಾರು 19 ನಿಮಿಷಗಳ ಪ್ರಯಾಣದ ನಂತರ 2,367 ಕೆ.ಜಿ ತೂಕದ ಈ ಉಪಗ್ರಹ ನಿಗದಿತ ಕಕ್ಷೆ ಸೇರಿದೆ. ಭೂಮಿಯಿಂದ 36 ಸಾವಿರ ಕಿಲೋಮೀಟರ್ ಎತ್ತರದಲ್ಲಿದ್ದುಕೊಂಡು ಪ್ರತೀ 30 ನಿಮಿಷಗಳಿಗೊಮ್ಮೆ ಭೂಮಿಯ ಅಗತ್ಯದ ಸ್ಪಷ್ಟ ಚಿತ್ರಗಳನ್ನು ರವಾನಿಸುವ ಸಾಮರ್ಥ್ಯ ಹೊಂದಿರುವುದರಿಂದಾಗಿ ಈ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಭಾರತದ ಕಣ್ಣು ಎಂದೇ  ವಿಶ್ಲೇಷಿಸಲಾಗುತ್ತಿದೆ. ಇದು ಜಿಯೋ ಸಿಮ್ ಕ್ರೋನಸ್ ಕಕ್ಷೆಯಿಂದ ಭಾರತಕ್ಕೆ  ಪ್ರಮುಖ ಕಾರ್ಯತಂತ್ರದ ದತ್ತಾಂಶಗಳನ್ನು ಒದಗಿಸುವ ಮೊದಲ ವಿಶೇಷ ಇಮೇಜಿನ್ ಉಪಗ್ರಹವಾಗಿದೆ. ಈ ನೂತನ ಉಪಗ್ರಹವು ಪ್ರಕೃತಿ ವಿಕೋಪಗಳು, ಚಂಡಮಾರುತ, ಮೇಘಸ್ಪೋಟ, ಗುಡುಗು ಸಹಿತ ಮಳೆಯಂತಹ ತುರ್ತು ಸಂದರ್ಭಗಳ ನೈಜ ಸಮಯದ ಮುನ್ಸೂಚನೆ ನೀಡಲು ನೆರವಾಗಲಿದೆ. ಮಾತ್ರವಲ್ಲ ಕೃಷಿ, ಅರಣ್ಯ ಸಂಪತ್ತು ಮತ್ತು ಜಲಮೂಲಗಳ ಮೇಲ್ವಿಚಾರಣೆಗೆ ಈ ಉಪಗ್ರಹದ ದತ್ತಾಂಶ ಉಪಯುಕ್ತವಾಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಇಸ್ರೋ ಇನ್ನೂ 6 ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ನೇವಿಗೇಶನ್ ಉಪಗ್ರಹದ ಉಡಾವಣೆಯನ್ನು ಒಳಪಡಿಸಲಾಗಿದೆಯೆಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ. ಇಂದು ಮುಂಜಾನೆ ಅತ್ಯಂತ ಯಶಸ್ವಿಯಾಗಿ ನಭಕ್ಕೆ ತಲುಪಿರುವ ಇಒಎಸ್ 3-05 ಉಪಗ್ರಹದ ಸೋಲಾರ್ ಪ್ಯಾನಲ್‌ಗಳು ತೆರೆದುಕೊಂಡಿದ್ದು ಕಾರ್ಯಾಚರಣೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇದರ ಕಕ್ಷೆಯನ್ನು ಮತ್ತಷ್ಟುಹೆಚ್ಚಿಸಿ ಈ ಪೂರ್ಣ ಪ್ರಮಾಣದಲ್ಲಿ  ಕಾರ್ಯವೆಸಗ ಲಿದೆಯೆಂದು ಅವರು ಹೇಳಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಇಸ್ರೋದ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೊಂಡಾಡಿದ್ದಾರೆ.

RELATED NEWS

You cannot copy contents of this page