ಕಾಸರಗೋಡು: ಸರಕಾರಿ ರಕ್ಷಿತಾರಣ್ಯಕ್ಕೆ ಅಕ್ರಮವಾಗಿ ನುಗ್ಗಿ ಜಿಂಕೆಯನ್ನು ಕೊಂದು ಮಾಂಸ ಮಾಡಿದ ಬೇಟೆಗಾರರ ತಂಡದ ಓರ್ವನನ್ನು ಅರಣ್ಯಪಾಲಕರ ತಂಡ ಬಂಧಿಸಿದೆ. ಪಾಣತ್ತೂರು ಕರಿಕ್ಕೆ ತೋಟಂ ನಿವಾಸಿ ಎಚ್.ಎಂ. ಸಿದ್ದೀಕ್ (30) ಬಂಧಿತ ಆರೋಪಿ. ಇದೇ ವೇಳೆ ಈತನ ಜತೆಗಿದ್ದ ನೌಫಲ್ ಮತ್ತು ಸುಬೈರ್ ಎಂಬಿಬ್ಬರು ಪರಾರಿಯಾಗಿರುವುದಾಗಿ ಅರಣ್ಯಾಧಿಕಾರಿ ಗಳು ತಿಳಿಸಿದ್ದಾರೆ. ಪನತ್ತಡಿ ರಕ್ಷಿತಾರಣ್ಯಕ್ಕೆ ಒಳಪಟ್ಟ ಕುಪ್ಪ ಎಂಬಲ್ಲಿ ಬೇಟೆಗಾರರ ತಂಡ ಅಕ್ರಮವಾಗಿ ವನ್ಯ ಜೀವಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಹೊಸದುರ್ಗ ರೇಂಜ್ ಅರಣ್ಯಾಧಿಕಾರಿ ಕೆ. ರಾಹುಲ್ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಸೆಕ್ಷನ್ ಫಾರೆಸ್ಟ್ ಆಫೀಸರ್ ಎಂ.ವಿ. ರಾಜು ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ತಂಡಕ್ಕೆ ಸೇರಿದ ಓರ್ವನನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.
ಈವೇಳೆ ಆತನ ಜತೆಗಿದ್ದ ಇಬ್ಬರು ಅಲ್ಲಿಂದ ಪರಾರಿಯಾದರು. ಈ ತಂಡ ಜಿಂಕೆಯನ್ನು ಕೊಂದು ಅದನ್ನು ತುಂಡರಿಸಿ ಮಾಂಸ ಮಾಡಿದ್ದರು. ಇದು ಒಟ್ಟು ೪೦ ಕಿಲೋ ತೂಕವಿದ್ದು ಅದನ್ನು ಹಾಗೂ ವನ್ಯಜೀವಿಗಳ ಬೇಟೆಗಾರರು ಉಪಯೋಗಿಸುತ್ತಿದ್ದ ಬಂದೂಕು ಮತ್ತು ಗುಂಡುಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದ ಜಿಲ್ಲಾ ಅರಣ್ಯಾಧಿಕಾರಿ ಎಂ. ರಾಜೀವನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರಲ್ಲದೆ ಬಂಧಿತ ಆರೋಪಿಯ ಹೇಳಿಕೆ ದಾಖಲಿಸಿಕೊಂಡರು.
ಈ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳ ತಂಡದಲ್ಲಿ ಬೀಟ್ ಫಾರೆಸ್ಟ್ ಆಫೀಸರ್ಗಳಾದ ವಿ.ವಿ. ಪ್ರಕಾಶನ್, ಡಿ. ವಿಮಲ್ರಾಜ್, ವಿ. ವಿನೀತ್, ಜಿ.ಎನ್ ಪ್ರವೀಣ್ ಕುಮಾರ್, ಫಾರೆಸ್ಟ್ ಬೀಟ್ ಅಸಿಸ್ಟೆಂಟ್ ಎಂ.ಎನ್. ಸುರೇಶ್ ಎಂಬವರು ಒಳಗೊಂಡಿದ್ದರು. ಪರಾರಿಯಾಗಿರುವ ಇತರ ಇಬ್ಬರು ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿ ಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವನ್ಯಜೀವಿಗಳ ಬೇಟೆ ಇತ್ತೀಚೆಗಿನಿಂದ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಿಶೇಷ ನಿಗಾ ಇರಿಸಲಾಗಿದೆಯೆಂದು ಅರಣ್ಯಾಧಿಕಾ ರಿಗಳು ತಿಳಿಸಿದ್ದಾರೆ.






