ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅನಧಿಕೃತ ಪ್ರಾಕೃತಿಕ ಸಂಪನ್ಮೂಲಗಳ ಕೊಳ್ಳೆ ಹೊಡೆಯುವುದರ ವಿರುದ್ಧ ಮೈನಿಂಗ್ ಆಂಡ್ ಜಿಯೋಲಜಿ ಇಲಾಖೆ ಆಪರೇಶನ್ ತೂಫಾನ್ ಮಾದರಿಯಲ್ಲಿ ಕಾರ್ಯಾಚರಣೆ ಆರಂಭಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಕೇಶವ ನಾಯಕ್ ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಕೊಯಿಪ್ಪಾಡಿ, ಪುತ್ತಿಗೆ, ಬಾಯಾರು ಗ್ರಾಮಗಳ ಅನಂತಪುರ, ಪಾದೆಕಲ್ಲು, ಪೈವಳಿಕೆ ಮೊದಲಾದ ಪ್ರದೇಶಗಳಿಂದ ಮಣ್ಣು, ಕೆಂಪುಕಲ್ಲು ಸಹಿತ ಪ್ರಕೃತಿ ಸಂಪನ್ಮೂಲಗಳನ್ನು ಕಾನೂನು ವಿರುದ್ಧವಾಗಿ ಕೊಳ್ಳೆಹೊಡೆಯುತ್ತಿ ರುವುದು ಮುಂದುವರಿಯುತ್ತಿದೆ. ಕರ್ನಾಟಕ ಸಹಿತ ನೆರೆ ರಾಜ್ಯಗಳಿಗೆ ಇವುಗಳನ್ನು ಸಾಗಿಸಲಾಗುತ್ತಿದೆ. ಕಳೆದ ೫ ವರ್ಷಗಳಿಂದ ಈ ದಂಧೆ ನಡೆಯುತ್ತಿದೆ. ಟೋರಸ್ ಲಾರಿಗಳಲ್ಲಿ ಹಗಲು, ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಮಣ್ಣು, ಕೆಂಪುಕಲ್ಲು ಸಾಗಾಟ ನಡೆಯುತ್ತಿದ್ದು, ಇದಕ್ಕೆ ಅಧಿಕಾರಿಗಳ ಒತ್ತಾಸೆಯೂ ಇದೆ. ಮಂಜೇಶ್ವರ, ಕಾಸರಗೋಡು ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಅನಧಿಕೃತ ಕೆಂಪುಕಲ್ಲು ಕೋರೆಗಳ ಚಟುವಟಿಕೆ ನಿರಂತರ ನಡೆಯುತ್ತಿದೆ
. ಇದರ ವಿರುದ್ಧ ಸಚಿವರುಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ದೂರುನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲ.ಉನ್ನತ ರಾಜಕೀಯ ನಾಯಕತ್ವದೊಂದಿಗೆ ಸ್ವಾಧೀನವುಳ್ಳ ಮಾಫಿಯಾಗಳು ಈ ದಂಧೆಯಲ್ಲಿ ಕಾರ್ಯಾಚರಿಸುತ್ತಿರುವುದಾಗಿ ಸಂಶಯಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡುವವರ ಮಾಹಿತಿಗಳನ್ನು ಕಂದಾಯ, ಮೈನಿಂಗ್ ಆಂಡ್ ಜಿಯೋಲಜಿ ಇಲಾಖೆಗಳ ಕೆಲವು ಅಧಿಕಾರಿಗಳೇ ಮಾಫಿಯಾಗಳಿಗೆ ಸೋರಿಕೆ ಮಾಡುತ್ತಿರುವುದಾಗಿಯೂ ಕೇಶವ ನಾಯ್ಕ್ ಆರೋಪಿಸಿದ್ದಾರೆ. ಪ್ರವಾಸಿ ಕೇಂದ್ರವಾದ ಅನಂತಪುರ ಉದ್ದಿಮೆ ಪಾರ್ಕ್‌ನ ಸಮೀಪ ಪ್ರದೇಶಗಳು ಒಳಗೊಂಡ ಸ್ಥಳಗಳಲ್ಲಿ ನಡೆಯುವ ಪ್ರಕೃತಿ ಸಂಪನ್ಮೂಲಗಳ ಅನಧಿಕೃತ ಶೋಷಣೆಯನ್ನು ನಿಯಂತ್ರಿಸಲು ಸರಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಅನಿಯಂತ್ರಿತವಾಗಿ ಇಂತಹ ಶೋಷಣೆ ಮುಂದುವರಿದರೆ ಚೂರಲ್‌ಮಲೆ, ಮುಂಡಕ್ಕೈಯಲ್ಲಿ ಸಂಭವಿಸಿದಂತಹ ದುರಂತಗಳಿಗೆ ಸಮಾನಾಂತರವಾದ ಪರಿಸ್ಥಿತಿ ಇಲ್ಲಿಯೂ ಉಂಟಾಗಲಿದೆಯೆಂದೂ ಆದ್ದರಿಂದ ಮಣ್ಣು, ಕೆಂಪುಕಲ್ಲು ಮಾಫಿಯಾಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಶವ ನಾಯಕ್ ಒತ್ತಾಯಿಸಿದ್ದಾರೆ.






