ಮಂಗಳೂರು- ಕಾಸರಗೋಡು ರೂಟ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ :ಉಪ್ಪಳ, ಹೊಸಂಗಡಿ, ಮಂಜೇಶ್ವರದವರಿಗೆ ನಿತ್ಯವೂ ಪರದಾಟ

ಹೊಸಂಗಡಿ: ಕಾಸರಗೋಡು- ಮಂಗಳೂರು ರೂಟ್‌ನಲ್ಲಿ ಸಂಚರಿಸುವ ಕೇರಳ ರಾಜ್ಯ ಸಾರಿಗೆ ಬಸ್‌ಗಳಿಂದ ಪ್ರಯಾಣಿಕರಿಗೆ ಸಂಕಷ್ಟ ಹೆಚ್ಚುತ್ತಿದ್ದು, ಪ್ರಯೋಜನ ಕಡಿಮೆಯಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಒಂದೆರಡಲ್ಲ ಹಲವಾರು ಸಮಸ್ಯೆಗಳ ಸುಳಿಯಿಂದ ಬಸ್ ಪ್ರಯಾಣಿಕರು ಸುಸ್ತಾಗುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರವೇ ಸಂಚರಿಸುವ ಈ ರೂಟ್‌ನಲ್ಲಿ ಇತರ ಬಸ್‌ಗಳನ್ನು ಆಶ್ರಯಿಸಿ ಸಂಚರಿಸಲು ಸಾಧ್ಯವಿಲ್ಲದ ಕಾರಣ ಕೆಲವೊಮ್ಮೆ ಗಂಟೆಗಳ ಕಾಲ ಬಸ್‌ಗಾಗಿ ಕಾಯಬೇಕಾಗುತ್ತದೆ.

ಬಸ್‌ಗಳು ಸರ್ವೀಸ್ ರಸ್ತೆಯನ್ನು ಬಿಟ್ಟು ಹೆದ್ದಾರಿಯಲ್ಲಿ  ಸಂಚರಿಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಬೆಳಗ್ಗಿನ ಹೊತ್ತು ಕಾಸರಗೋಡಿನಿಂದ ಮಂಗಳೂರಿಗೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಕೇರಳ ಕೆಎಸ್‌ಆರ್‌ಟಿಸಿ ಮಾತ್ರ ಲಭ್ಯವಾಗುತ್ತಿದ್ದು, ಇವುಗಳು ಒಂದರ ಹಿಂದೆ ಒಂದರಂತೆ ಸಂಚರಿಸಿ ಹೆದ್ದಾರಿಯಲ್ಲಿ ಭರದಿಂದ ಸಾಗುತ್ತಿವೆ. ಇದರಿಂದಾಗಿ ಅಲ್ಲಲ್ಲಿ ಸರ್ವೀಸ್ ರಸ್ತೆಯಲ್ಲಿ ಕಾಯುತ್ತಿರುವ ಪ್ರಯಾಣಿಕರು, ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಸಂಕಷ್ಟ ಅನುಭವಿಸಬೇಕಾಗುತ್ತಿದೆ. ಕೆಲವೊಮ್ಮೆ ಒಂದೊಂದು ಬಸ್ ಸರ್ವೀಸ್ ರಸ್ತೆಯಲ್ಲಿ ಬಂದರೂ ಅದರಲ್ಲಿ ಪ್ರಯಾಣಿಕರು ತುಂಬಿಕೊಂಡಿರುವ ಕಾರಣ ಹತ್ತಲು ಅಸಾಧ್ಯವಾಗುತ್ತಿದೆ. ಅಲ್ಲದೆ ಜನದಟ್ಟಣೆ ಇರುವ ಕಾರಣ ಬಸ್ ತಂಗುದಾಣದಲ್ಲಿ ನಿಲ್ಲಿಸದೆ ದೂರನಿಲ್ಲಿಸಿ ಜನರನ್ನು ಇಳಿಸಿ ಹತ್ತಿಸದೆ ಸಾಗುತ್ತಿರುವುದಾಗಿಯೂ ಆರೋಪವಿದೆ.

ಕೇರಳ ಸಾರಿಗೆ ಬಸ್‌ಗಳು ಹಳೆಯದಾದ ಕಾರಣ ಕೆಲವು ಅಲ್ಲಲ್ಲಿ ಹಾನಿಯಾಗುತ್ತಿದ್ದು, ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವು ದಾಗಿಯೂ ಹೇಳಲಾಗುತ್ತಿದೆ. ಇತ್ತೀಚೆಗೆ ಒಂದು ಬಸ್ ಬ್ರೇಕ್‌ಫೈಲ್ ಆಗಿದೆ ಎಂದು ಪ್ರಯಾಣಿಕರನ್ನು ರಸ್ತೆಯಲ್ಲಿಳಿಸಿದ್ದು, ಆದರೆ ಬೇರೆ ಬಸ್‌ನ ವ್ಯವಸ್ಥೆ ಮಾಡಿರಲಿಲ್ಲವೆಂದೂ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ದಿನಂಪ್ರತಿ ಸಂಚರಿಸುವ ವಿದ್ಯಾರ್ಥಿಗಳು, ಅವಸರದಿಂದ ಕೆಲಸಕ್ಕೆ ತೆರಳುವವರು, ಆಸ್ಪತ್ರೆ ಅಗತ್ಯಗಳಿಗಾಗಿ ಮಂಗಳೂರಿಗೆ ತೆರಳುವ ರೋಗಿಗಳು ಇವರೆಲ್ಲ ಮಂಗಳೂರು ರೂಟ್‌ನಲ್ಲಿ ಬಹಳ ಸಂಚಾರ ಸಮಸ್ಯೆ  ಎದುರಿಸುತ್ತಿದ್ದಾರೆ. ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ವೇಳೆ ಇದು ತಾರಕಕ್ಕೇರುತ್ತಿದೆ. ಶೀಘ್ರ ಇದಕ್ಕೆ ಪರಿಹಾರ ಕಾಣದಿದ್ದರೆ ಸ್ಥಳೀಯರು ಪ್ರತಿಭಟನೆ ನಡೆಸಲು ಮುಂದಾಗುತ್ತಿರುವುದಾಗಿ ತಿಳಿದು ಬಂದಿದೆ. ಅಧಿಕಾರಿವರ್ಗ ಇನ್ನಾ ದರೂ ಕಣ್ಣು ತೆರೆಯಬೇಕಾಗಿದೆ.

RELATED NEWS

You cannot copy contents of this page