ಕುಂಬಳೆ: ಕುಂಬಳೆ ಪೇಟೆಯಲ್ಲಿ ರೈಲು ನಿಲ್ದಾಣ ಸಮೀಪದ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಪೇಟೆಯ ಕೆಲವು ಹೋಟೆಲ್ ಸಹಿತ ಕಟ್ಟಡಗಳ ತ್ಯಾಜ್ಯ ನೀರನ್ನು ಚರಂಡಿಗೆ ಹರಿಯಬಿಟ್ಟ ಪರಿಣಾಮ ಈ ಸಮಸ್ಯೆ ಹುಟ್ಟಿಕೊಂಡಿದೆ.
ಕೆಲವು ಹೋಟೆಲ್ ಹಾಗೂ ಕಟ್ಟಡಗಳಿಂದ ಹರಿಯಬಿಟ್ಟ ತ್ಯಾಜ್ಯ ನೀರು ಚರಂಡಿಯಲ್ಲಿ ಸಾಗಿ ಕುಂಬಳೆ ರೈಲು ನಿಲ್ದಾಣ ಬಳಿ ಅಂಡರ್ ಪಾಸ್‌ನ ಸಮೀಪದಲ್ಲಿರುವ ಸರ್ವೀಸ್ ರಸ್ತೆಯ ಮೂಲಕ ಹರಿಯುತ್ತಿದೆ. ಇದು ಚರಂಡಿಯಲ್ಲಿ ತುಂಬಿ ಸರ್ವೀಸ್ ರಸ್ತೆ ಮೇಲೆ ಕಟ್ಟಿ ನಿಂತಿದೆ. ಇದು ವಾಹನಗಳು ಸಂಚರಿಸುವ ವೇಳೆ ಪಾದಚಾರಿಗಳ ಮೈಗೆ ಎರಚಲ್ಪಡುತ್ತಿದೆ. ಅಲ್ಲದೆ ಮಲಿನ ಜಲದ ತೀವ್ರ ದುರ್ನಾತದಿಂದ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆಯೆಂದು ಸ್ಥಳೀಯರು ದೂರುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.







