ದೆಹಲಿಯನ್ನು ಕೇಂದ್ರೀಕರಿಸಿ ಎಂಡಿಎಂಎ ತಯಾರಿಸಿಕೇರಳದಲ್ಲಿ ವಿತರಿಸುವ ವಿದೇಶಿ ಯುವತಿಯರ ಸೆರೆ

ಕಾಸರಗೋಡು: ದೆಹಲಿಯನ್ನು ಕೇಂದ್ರೀಕರಿಸಿ ಮಾದಕ ದ್ರವ್ಯವಾದ ಎಂಡಿಎಂಎ ತಯಾರಿಸಿ ಅದನ್ನು ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ವಿತರಿಸುವ ದಂಧೆಗೆ ಸೇರಿದ ಇಬ್ಬರು ವಿದೇಶಿ ಯುವತಿಯರನ್ನು ಕಣ್ಣೂರು ಸಿಟಿ ಪೊಲೀಸ್ ಸ್ಕ್ವಾಡ್ ಬಂಧಿಸಿದೆ.

ನೈಜೀರಿಯ  ಪ್ರಜೆ ಬೆನೆಲೊ ಲಿಲಿಯನ್ (36) ಮತ್ತು ಕ್ಯಾಮರೂನ್ ಪ್ರಜೆ ಫಿಲೋಮೆನ ಚೌನ್‌ಸೆಲಿನ್ (30) ಬಂಧಿತರಾದ ಯುವತಿಯರು. ನ್ಯೂಮಾಹಿಯಿಂದ ಪೊಲೀಸರು ದಿನಗಳ ಹಿಂದೆ 0.6 ಗ್ರಾಂ ಎಂಡಿಎಂಎ ಸಹಿತ ರಿಜಿನಾಸ್ (31) ಎಂಬಾತನನ್ನು ಬಂಧಿಸಿದ್ದರು. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ತನಗೆ ಈ ಮಾಲು ನೀಡಿರುವುದು ಮಾದಕದ್ರವ್ಯ ದಂಧೆಯ ಇನ್ನೋರ್ವ ಕೊಂಡಿಯಾಗಿರುವ ಮುಹಮ್ಮದ್ ಸಮೀಲ್ ಆಗಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ.  ಅದರಂತೆ ಪೊಲೀಸರು ಸಮೀಲ್‌ನ ಮನೆಗೆ ದಾಳಿ ನಡೆಸಿ ಆತನ ವಾಹನವನ್ನು ತಪಾಸಣೆಗೊಳಪಡಿಸಿದಾಗ 185 ಗ್ರಾಂ ಎಂಡಿಎಂಎ ಪತ್ತೆಹಚ್ಚಿತ್ತು. ಆತನ ಮೊಬೈಲ್ ಪೋನ್, ಬ್ಯಾಂಕ್ ದಾಖಲುಪತ್ರಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಅದರಲ್ಲಿ ತಂಬು ಯಾನೇ ಮುಜಿತಾಬ್ ಎಂಬ ಹೆಸರಿನ ಮಾದಕದ್ರವ್ಯ ಸಾಗಾಟದ ದಲ್ಲಾಳಿಯ ಬಗ್ಗೆ ಮಾಹಿತಿ ಲಭಿಸಿದೆ. ಈತ ಮಾದಕದ್ರವ್ಯವವನ್ನು ತಂದಿರಿಸುವ ಲೊಕೇಷನ್ ಬಗ್ಗೆ ಅದರ ವಿತರಣೆಗಾರರಿಗೆ ಗುಪ್ತವಾಗಿ ನೀಡುವ ಹೈಟೆಕ್ ರೀತಿಯನ್ನು  ಅನುಸರಿಸುತ್ತಿದ್ದನು. ಅದರಂತೆ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ದೆಹಲಿಯನ್ನು ಕೇಂದ್ರೀಕರಿಸಿ ಕೇರಳಕ್ಕೆ ಮಾದಕ ದ್ರವ್ಯ ಸಾಗಿಸುವ ವ್ಯಕ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ  ಲಭಿಸಿತ್ತು. ಈ ಮಧ್ಯೆ ಮುಜಿತಾಬ್‌ನ  ಸಹಚರ ಅರ್ಶಾದ್ ಅಲಿ  ಎಂಬಾತನನ್ನು ಹರಿಯಾಣ ಪೊಲೀಸರು 800 ಗ್ರಾಂ ಎಂಡಿಎಂಎ ಸಹಿತ ಗುರುಗ್ರಾಮದಿಂದ ಬಂಧಿಸಿದ್ದರು.  ಅದಾದ ಬೆನ್ನಲ್ಲೇ ಲಭಿಸಿದ ಗುಪ್ತ ಮಾಹಿತಿಯಂತೆ ಈ ಮಾದಕ ದ್ರವ್ಯ ದಂಧೆಗಾಗಿ ನಕಲಿ ದಾಖಲು ಪತ್ರಗಳು, ಸಿಮ್ ಕಾರ್ಡ್‌ಗಳು, ಮ್ಯೂಚ್ಚುವಲ್ ಅಕೌಂಟ್‌ಗಳನ್ನು ತಯಾರಿಸಿ ನೀಡುವ ಎರ್ನಾಕುಳಂನ ಅಬ್ದುಲ್ ರಹ್‌ಮಾನ್ ಮತ್ತು ರಿಶಾದ್ ಎಂಬಿಬ್ಬರನ್ನು ಕಣ್ಣೂರು ಪೊಲೀಸರು ಬಂಧಿಸಿದ್ದರು. ಇವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ದೆಹಲಿಯನ್ನು ಕೇಂದ್ರವನ್ನಾಗಿಸಿ ಎಂಡಿಎಂಎ ತಯಾರಿಸಿ ವಿತರಿಸುವ ಈ ಎರಡು ವಿದೇಶಿ ಯುವತಿಯರ ಕುರಿತಾದ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅದರಂತೆ ಕಣ್ಣೂರು ಸಿಟಿ ಪೊಲೀಸರ ವಿಶೇಷ ತಂಡ ದೆಹಲಿಗೆ ಸಾಗಿ 10 ದಿನಗಳ ತನಕ ನೆಲೆಯೂರಿ ನಡೆಸಿದ ಅತೀ ಗುಪ್ತ ಕಾರ್ಯಾ ಚರಣೆಯ ಫಲವಾಗಿ ಈ ಎರಡು ವಿದೇಶಿ ಮಹಿಳೆಯರನ್ನು ಪತ್ತೆಹಚ್ಚಿ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಕಣ್ಣೂರು ಸಿಟಿ ಪೊಲೀಸ್ ಕಮಿಷನರ್ ಬಿ.ವಿ. ವಿಜಯ್ ಭರತ್ ರೆಡ್ಡಿಯ ನಿರ್ದೇಶ ಪ್ರಕಾರ, ತಲಶ್ಶೇರಿ ಎಎಸ್‌ಪಿ ಡಾ. ಎಂ. ನಂದಗೋಪನ್‌ರ ನೇತೃತ್ವದ ಪೊಲೀಸರ ತಂಡ  ಈ ವಿದೇಶಿ ಮಹಿಳೆಯರನ್ನು ಬಂಧಿಸಿದೆ.

ಈ ದಂಧೆಯನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಪೊಲೀಸರು ನಿರಂತರವಾಗಿ ನಡೆಸಿದ ಕಾರ್ಯಾಚರಣೆಗಳಲ್ಲಿ ಮಾದಕ ದ್ರವ್ಯ ವ್ಯವಹಾರಕ್ಕಾಗಿ ಉಪಯೋಗಿಸ ಲಾಗುತ್ತಿದ್ದ 20ರಷ್ಟು ಬ್ಯಾಂಕ್ ಖಾತೆಗಳು, 50ರಷ್ಟು ಆಧಾರ್ ಕಾರ್ಡ್‌ಗಳು, ಹಲವು ಪಾನ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇಲೆಕ್ಟ್ರೋನಿಕ್ ಸಾಮಗ್ರಿಗಳ ಒಳಗೆ ಬಚ್ಚಿಟ್ಟು ಈ ದಂಧೆ ಯವರು ಮಾದಕ ದ್ರವ್ಯಗಳನ್ನು ವಿತರಿಸು ತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page