ಕಾಸರಗೋಡು: ಪಾಠವನ್ನು ಕಲಿಯದ ಹೆಸರಲ್ಲಿ 12ರ ಹರೆಯದ ಮದ್ರಸ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಹಲ್ಲೆಗೈದು ಬೆದರಿಸಿದ ಉಸ್ತಾದ್ ಬೇಕಲ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸರು ತಾಕೀತು ನೀಡಿ ಬಿಡುಗಡೆಗೊಳಿಸಿದರು. ಮಲಪ್ಪುರಂ ನಿವಾಸಿ ಹಾಗೂ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮದ್ರಸ ಅಧ್ಯಾಪಕನಾದ ಯುವಕ ನಿನ್ನೆ ಮಧ್ಯಾಹ್ನ ಠಾಣೆಗೆ ತಲುಪಿದ್ದಾರೆ. ಈತನ ವಿರುದ್ಧ ಬಾಲಕಿ ಅಥವಾ ಮನೆ ಮಂದಿ ದೂರು ನೀಡದ ಹಿನ್ನೆಲೆಯಲ್ಲಿ ತಾಕೀತು ನೀಡಿ ಬಿಡುಗಡೆಗೊಳಿಸಲಾಗಿದೆ. ಪೊಲೀಸ್ ಕ್ರಮಕ್ಕೆ ವಿದೇಯನಾದ ಹಿನ್ನೆಲೆಯಲ್ಲಿ ಉಸ್ತಾದ್ನನ್ನು ಮದ್ರಸ ಸಮಿತಿ ಕೆಲಸದಿಂದ ಅಮಾನತುಗೊಳಿಸಿದೆ.
೧೨ರ ಹರೆಯದ ಮದ್ರಸ ವಿದ್ಯಾರ್ಥಿನಿಯಾದ ಬಾಲಕಿ ಶನಿವಾರ ಬೆಳಿಗ್ಗೆ ೬.೪೫ರಿಂದ ನಾಪತ್ತೆಯಾಗಿದ್ದಳು. ಮದ್ರಸಕ್ಕೆಂದು ತಿಳಿಸಿ ಮನೆಯಿಂದ ಹೊರಟಿದ್ದ ಈಕೆ ಅಲ್ಲಿಗೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಬೇಕಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದ ಮಧ್ಯೆ ಬಾಲಕಿಯನ್ನು ಮಂಗಳೂರಿನಿಂದ ಪತ್ತೆಹಚ್ಚಲಾಗಿತ್ತು. ಆಟೋ ಚಾಲಕನ ಸಹಾಯದೊಂದಿಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ತಲುಪಿದ ಬಾಲಕಿ ತನ್ನನ್ನು ಕಪ್ಪು ಬಣ್ಣದ ಕಾರಿನಲ್ಲಿ ತಲುಪಿದ ಇಬ್ಬರು ಅಪಹರಿಸಿಕೊಂಡು ಹೋಗಿರುವುದಾಗಿ ಹೇಳಿಕೆ ನೀಡಿದ್ದಳು. ಬಾಲಕಿಯನ್ನು ಪತ್ತೆಹಚ್ಚಿದ ವಿಷಯ ಪಾಂಡೇಶ್ವರ ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ಬೇಕಲ ಪೊಲೀಸರು ಹಾಗೂ ಸಂಬಂಧಿಕರು ಮಂಗಳೂರಿಗೆ ತಲುಪಿ ಬಾಲಕಿಯನ್ನು ಊರಿಗೆ ಕರೆದೊಯ್ದಿದ್ದರು. ಪೊಲೀಸರು ತಲುಪಿ ಸಮಗ್ರ ವಿಚಾರಣೆ ನಡೆಸಿದಾಗ ಈಕೆಯನ್ನು ಅಪಹರಿಸಿದ್ದಲ್ಲವೆಂಬ ವಿಷಯ ಬಹಿರಂಗಗೊಂಡಿದೆ. ಪಾಠಭಾಗಗಳನ್ನು ಕಲಿಯದ ಹಿನ್ನೆಲೆಯಲ್ಲಿ ಅಧ್ಯಾಪಕ ಕ್ರೂರವಾಗಿ ಹೊಡೆದಿರುವು ದಾಗಿಯೂ, ಮತ್ತೆ ಪೆಟ್ಟು ಲಭಿಸಬಹುದೆಂಬ ಬೆದರಿಕೆಯಿಂದ ಸ್ವತಃ ರೈಲು ಹತ್ತಿ ತೆರಳಿರುವುದಾ ಗಿಯೂ ಬಾಲಕಿ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಧ್ಯಾಪಕನನ್ನು ಫೋನ್ನಲ್ಲಿ ಕರೆ ಮಾಡಿ ಠಾಣೆಗೆ ಹಾಜರಾಗಲು ನಿರ್ದೇಶಿಸಿದ್ದರು. ಆದರೆ ಮಲಪ್ಪುರಂನಲ್ಲಿ ಇರುವುದಾಗಿಯೂ, ಸೋಮವಾರ ಹಾಜರಾಗುವುದಾಗಿ ಅಧ್ಯಾಪಕ ಅಂದು ಪೊಲೀಸರಿಗೆ ತಿಳಿಸಿದ್ದು, ಇದರಂತೆ ನಿನ್ನೆ ಅಧ್ಯಾಪಕ ಬೇಕಲ ಠಾಣೆಗೆ ಹಾಜರಾಗಿದ್ದಾರೆ.





