ಕಾಸರಗೋಡು: ಹಲವು ದ್ವಿಚಕ್ರ ವಾಹನ ಕಳವುಗೈದ ಪ್ರಕರಣಗಳ ಆರೋಪಿಯನ್ನು ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ ಕಳವುಗೈದ ಬೈಕ್‌ಗಳ ಪೈಕಿ ಒಂದನ್ನು ಪೊಲೀಸರು ವಶಪಡಿಸಿದ್ದಾರೆ. ನೀಲೇಶ್ವರ ಚೆರುಪುರಂ ಅರಿಂಗೀಲ್‌ನ ಸಮೀರ್ (30) ಪೊಲೀಸ್ ಕಸ್ಟಡಿಗೊಳಗಾದ ಆರೋಪಿ. ಆತನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದು, ಕಳವಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕತೊಡಗಿದ್ದಾರೆ. ಮಾತ್ರವಲ್ಲ ಕದ್ದ ಇತರ ದ್ವಿಚಕ್ರ ವಾಹನಗಳ ಪತ್ತೆಗಾಗಿ ತೀವ್ರ ಯತ್ನ ಆರಂಭಿಸಿದ್ದಾರೆ. ಈತಿಂಗಳ ೪ರಂದು ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಎರಡು ಬೈಕ್‌ಗಳನ್ನು ಕಳವುಗೈಯ್ಯಲಾಗಿತ್ತು. ಚೆಂಗಳ ಚೇರೂರು ಮೀನಾಂಕೋಡ್ ಕಮ್ಮಟ ಹೌಸ್‌ನ ಅಬ್ದುಲ್ ಖಾದರ್ ಎಂಬವರ ೩೦ ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್ ಹಾಗೂ ಕೂಡ್ಲು ಆಜಾದ್‌ನಗರ ಪಾಯಿಚ್ಚಾಲ್ ರಸ್ತೆ ಬಳಿಯ ರಜಾಕ್ ಎಂಬವರ ೩೦ ಸಾವಿರ ರೂ. ಮೌಲ್ಯದ ಬೈಕ್‌ನ್ನು ಕಳವುಗೈಯ್ಯಲಾಗಿತ್ತು. ಆ ಬಗ್ಗೆ ನೀಡಲಾದ ದೂರಿನಲ್ಲಿ ಕಾಸರಗೋಡು ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಸಮೀರ್‌ನ ಬಗ್ಗೆ ಮಾಹಿತಿ ಲಭಿಸಿದ್ದು, ಅದರ ಆಧಾರದಲ್ಲಿ ಆತನನ್ನು ವಶಕ್ಕೆ ತೆಗೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.






