45 ದಿನದೊಳಗೆ ಸಾರಿಗೆ ವ್ಯವಸ್ಥೆಗೆ ಪರಿಹಾರ ಉಂಟಾಗದಿದ್ದರೆ ತೀವ್ರ ಆಂದೋಲನ-ಮಾನವ ಸರಪಳಿಯಲ್ಲಿ ಮುನ್ನೆಚ್ಚರಿಕೆ

ಕಾಸರಗೋಡು: ನಗರದ ತೀವ್ರ ಸಾರಿಗೆ ಸಂಚಾರ ತಡೆಗೆ ಶಾಶ್ವತ ಪರಿಹಾರ ಕಾಣಬೇಕು, ಎಂ.ಜಿ. ರಸ್ತೆ ಸಹಿತದ ಪ್ರಧಾನ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು, ಅನಧಿಕೃತ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಬೇಕು, ವೈಜ್ಞಾನಿಕವಾದ ಪಾರ್ಕಿಂಗ್ ವ್ಯವಸ್ಥೆ ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಜನಪರ ಅಭಿವೃದ್ಧಿ ಸಮಿತಿ ಹಾಗೂ ರೋಡ್ ಟಿಕಾರೊ ಒಕ್ಕೂಟದ ನೇತೃತ್ವದಲ್ಲಿ ಮಾನವ ಸರಪಳಿ ಆಯೋಜಿಸಲಾಯಿತು. ನಿನ್ನೆ ಹೊಸ ಬಸ್ ನಿಲ್ದಾಣದ ವೃತ್ತದಿಂದ ಆರಂಭಿಸಿ ಎಂ.ಜಿ. ರಸ್ತೆ ವರೆಗಿರುವ ವಲಯದ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ನಡೆಸಿದ ಮಾನವ ಸರಪಳಿಯಲ್ಲಿ ಹಲವಾರು ಮಂದಿ ಭಾಗವಹಿಸಿ ಬೆಂಬಲ ಸೂಚಿಸಿದರು. 45ದಿನದೊಳಗೆ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಸೂಕ್ತ ಹಾಗೂ ಫಲಪ್ರದವಾದ ಕ್ರಮ ಉಂಟಾಗದಿದ್ದರೆ ದಿಗ್ಬಂಧನ ಸಹಿತದ ತೀವ್ರ ಆಂದೋಲನದೊಂದಿಗೆ ಮುಂದುವರಿಯುವುದಾಗಿ ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಮುನ್ನೆಚ್ಚರಿಕೆ ನೀಡಿದರು.

ನಗರದ ರಸ್ತೆಗಳು ಅಗಲ ಕಿರಿದಾಗಿರುವುದು, ಬಹುಮಹಡಿ ಕಟ್ಟಡಗಳ ನಿರ್ಮಾಣದಲ್ಲಿ ಕಾನೂನು ಪಾಲಿಸಲಾಗಿದೆಯೋ ಎಂಬ ಬಗ್ಗೆ ಸಂಶಯ, ಕಾಲುದಾರಿಯ ಸ್ವಾಧೀನ, ಅನಧಿಕೃತ ಪಾರ್ಕಿಂಗ್, ಪಾರ್ಕಿಂಗ್ ವ್ಯವಸ್ಥೆಗಳ ಕೊರತೆ, ಸಾರಿಗೆ ನಿಯಂತ್ರಣದ ಲೋಪದೋಷಗಳು ಎಂಬಿವುಗಳಿಂದಾಗಿ ಸಂಚಾರ ಸಮಸ್ಯೆ ಉಲ್ಬಣಗೊಂಡಿದೆಯೆಂದು ಅಭಿಪ್ರಾಯ ಪಡಲಾಯಿತು. ಕಳೆದ ಆಗಸ್ಟ್ ೧೯ರಂದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಹನೀಫ್ ಬಾಂಗೋಡ್‌ರ ಸ್ಥಿತಿ ಇನ್ಯಾರಿಗೂ ಬಾರದಿರಲು ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ನಗರದಲ್ಲಿ ವೈಜ್ಞಾನಿಕವಾದ ರೀತಿಯ ಪೇ ಪಾರ್ಕಿಂಗ್ ವ್ಯವಸ್ಥೆ ಜ್ಯಾರಿಗೊಳಿಸಬೇಕು, ಕಾಲುದಾರಿಗಳ ಅನಧಿಕೃತ ಸ್ವಾಧೀನವನ್ನು ಹೊರತುಪಡಿಸಲು ಕಠಿಣ ಕ್ರಮಕೈಗೊಳ್ಳಬೇಕು. ಹೊಸ ಬಸ್ ನಿಲ್ದಾಣದ ಮೇಲ್ಸೇತುವೆಯ ಅಡಿಭಾಗದಲ್ಲಿರುವ ಸೂಕ್ತ ಸ್ಥಳವನ್ನು ಸಾರ್ವಜನಿಕರಿಗೆ ಪಾರ್ಕಿಂಗ್‌ಗಾಗಿ ನೀಡಬೇಕು, ಮೀನು ಮಾರುಕಟ್ಟೆ ಆಧುನಿಕ ವ್ಯವಸ್ಥೆಗಳೊಂದಿಗೆ ಪುನರುದ್ಧರಿಸಬೇಕು, ಮಾರುಕಟ್ಟೆಯ ವಾಹನ ಸಂಚಾರ ಕ್ರಮೀಕರಿಸುವುದಕ್ಕಾಗಿ ವನ್‌ವೇ ವ್ಯವಸ್ಥೆ ಸಹಿತದ ಕ್ರಮ ಕೈಗೊಳ್ಳಬೇಕು, ಟ್ರಾಫಿಕ್ ಪೊಲೀಸ್, ಮೋಟಾರ್ ವಾಹನ ಇಲಾಖೆ, ನಗರಸಭೆ ಎಂಬಿವುಗಳ ಸಂಯೋಜನೆಯೊಂದಿಗೆ ಸಮಗ್ರವಾದ ಟ್ರಾಫಿಕ್ ಮೇನೇಜ್‌ಮೆಂಟ್ ಪ್ಲಾನ್ ಸಿದ್ಧಪಡಿಸಿ ಸಮಯಾನುಸಾರ ಜ್ಯಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಯಿತು.  ಈ ಬೇಡಿಕೆಗಳನ್ನು ಆಗ್ರಹಿಸಿ ನಗರಸಭಾ ಅಧ್ಯಕ್ಷೆ, ಶಾಸಕ, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂಬಿವರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು. ಮಾನವ ಸರಪಳಿಯನ್ನು ನ್ಯಾಯವಾದಿ ಬಶೀರ್ ಆಲಾಡಿ ಉದ್ಘಾಟಿಸಿದರು. ಸೈಪುದ್ಧೀನ್ ಮಾಕೋಡ್ ಅಧ್ಯಕ್ಷತೆ ವಹಿಸಿದರು. ಹಮೀದ್ ಚಾತಂಗೈ ಸ್ವಾಗತಿಸಿದರು. ಸುಬೈರ್ ಪಡ್ಪು ಪ್ರಧಾನ ಭಾಷಣ ಮಾಡಿ ದರು. ಹಲವಾರು ಮಂದಿ ಭಾಗವಹಿಸಿದರು.

RELATED NEWS

You cannot copy contents of this page