ಕಾಸರಗೋಡು: ಹಾಡಹಗಲೇ ಅಂಗಡಿಯಿಂದ ಹಣ ಕಳವು ನಡೆಸಿ ಪರಾರಿಯಾದ ವ್ಯಕ್ತಿಯನ್ನು ಪೊಲೀಸರು ಗಂಟೆಗಳೊಳಗೆ ಬಂಧಿಸಿದ್ದಾರೆ. ಪಳಯಂಗಾಡಿ ವೆಂಙರ ನಿವಾಸಿಯೂ ಕಾಸರಗೋಡು ತಳಂಗರೆಯಲ್ಲಿ ವಾಸಿಸುವ ಪುನ್ನಕ್ಕನ್ ಮುಸಮ್ಮಿಲ್ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಆದಿತ್ಯವಾರ ಸಂಜೆ 4.30ರ ವೇಳೆ ಪಳಯಂಗಾಡಿಯ ಪಿ.ಎಂ.ಕೆ ಅಪ್ಸಲ್ ಎಂಬವರ ಅಂಗಡಿಯಿಂದ ಹಣ ಕಳವು ನಡೆಸಲಾಗಿತ್ತು. ಅಪ್ಸಲ್ ಅಂಗಡಿಯ ಹೊರಗೆ ತೆರಳಿದ ತಕ್ಷಣ ರಸ್ತೆ ಬದಿಯಲ್ಲಿ ನಿಂತಿದ್ದ ಮುಸಮ್ಮಿಲ್ ಅಂಗಡಿಗೆ ನುಗ್ಗಿ ೧೫ ಸಾವಿರ ರೂಪಾಯಿಗಳನ್ನು ಕಳವು ನಡೆಸಿ ಪರಾರಿಯಾಗಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ಪಳಯಂಗಾಡಿ ಪೊಲೀಸರು ತಲುಪಿ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಓರ್ವ ಸ್ನೇಹಿತನ ಮುಖಾಂತರ ಮುಸಮ್ಮಿಲ್ಗೆ ಫೋನ್ ಕರೆ ಮಾಡಿಸಿ ಪೊಲೀಸರು ಆತನನ್ನು ಬರುವಂತೆ ತಿಳಿಸಿದ್ದರು. ಸ್ನೇಹಿತನ ಫೋನ್ ಕರೆ ಬರುವಷ್ಟರಲ್ಲಿ ಮುಸ್ಸಮ್ಮಿಲ್ ಚೆರ್ವತ್ತೂರಿಗೆ ತಲುಪಿದ್ದನು. ತಾನು ಬೈಕ್ನಲ್ಲಿ ಬರುತ್ತೇನೆ, ಜತೆಯಾಗಿಯೇ ತೆರಳುವ ಎಂದು ಸ್ನೇಹಿತ ಮುಸಮ್ಮಿಲ್ಗೆ ತಿಳಿಸಿದ್ದನು. ಅದನ್ನು ನಂಬಿದ ಮುಸಮ್ಮಿಲ್ ಚೆರ್ವತ್ತೂರಿನಲ್ಲಿ ಕಾದು ನಿಂತಿದ್ದನು. ಕೂಡಲೇ ಸ್ನೇಹಿತ ಬೈಕ್ನಲ್ಲಿ ತೆರಳಿ ಮುಸಮ್ಮಿಲ್ನನ್ನು ಉಪಾಯದಿಂದ ಪಳಯಂಗಾಡಿಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.






