ಕಾಸರಗೋಡು: ಕಾರು ಬಿಡಿ ಭಾಗಗಳ ಅಂಗಡಿ ನಡೆಸುವ ಮರೆಯಲ್ಲಿ ಮಾದಕ ಪದಾರ್ಥ ವ್ಯವಹಾರ ನಡೆಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಣತ್ತೂರು ಬಾಪುಂಗಯ ಮಟ್ಟತ್ತಿಲ್ ನಿವಾಸಿ ಎಂ.ಎ. ಆರೀಫ್ (34ನನ್ನು ಜಿಲ್ಲಾ ನಾರ್ಕೋಟಿಕ್ ಸೆಲ್ ಡಾನ್ಸಾಪ್ ತಂಡ ಹಾಗೂ ಬೇಕಲ ಪೊಲೀಸರು ಜಂಟಿಯಾಗಿ ಬಂಧಿಸಿದ್ದಾರೆ. ಈತನಿಂದ 4.420 ಗ್ರಾಂ ಎಂಡಿಎಂಎ ಹಾಗೂ 30,000 ರೂ. ವಶಪಡಿಸಲಾಗಿದೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಉದುಮ ಪಳ್ಳದ ಒಂದು ಆಟೋಮೊಬೈಲ್ ಸಂಸ್ಥೆಯ ಸಮೀಪದಿಂದ ಈತನನ್ನು ಬಂಧಿಸಲಾಗಿದೆ.
ಸೆರೆಯಾದ ಆರೀಫ್ ಈ ಮೊದಲು ಪೊಲೀಸರ ನಿಗಾದಲ್ಲಿದ್ದಿರುವುದಾಗಿಯೂ ಹೇಳಲಾಗಿದೆ. ನಿನ್ನೆ ರಾತ್ರಿ ಬೇಕಲ ಎಸ್.ಐ. ಯು. ರೋಶಿತ್ ಹಾಗೂ ತಂಡ ಪಟ್ರೋಲಿಂಗ್ ನಡೆಸುತ್ತಿದ್ದ ಮಧ್ಯೆ ಪಳ್ಳಕ್ಕೆ ತಲುಪಿದ್ದರು. ಈ ವೇಳೆ ಪೊಲೀಸ್ ವಾಹನವನ್ನು ಕಂಡ ಯುವಕ ಮರದ ಮರೆಯಲ್ಲಿ ಅಡಗಿ ಕುಳಿತಿರುವುದನ್ನು ಕಂಡ ಪೊಲೀಸರು ವಾಹನವನ್ನು ನಿಲ್ಲಿಸಿದರು. ಈ ವೇಳೆ ಪರಾರಿಯಾಗಲು ಯುವಕ ಪ್ರಯತ್ನಿಸಿದಾಗ ಬೆನ್ನಟ್ಟಿ ಸೆರೆ ಹಿಡಿದು ದೇಹ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಹಚ್ಚಲಾಗಿದೆ ಎಂದು ಬೇಕಲ ಪೊಲೀಸರು ನೋಂದಾಯಿಸಿದ ಕೇಸಿನಲ್ಲಿ ತಿಳಿಸಲಾಗಿದೆ.






