10 ದಿನಗಳೊಳಗಾಗಿ ಕಳವು ನಡೆಸಿದ್ದು ನಾಲ್ಕು ದ್ವಿಚಕ್ರ ವಾಹನಗಳು: ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ಬಂಧಿಸಿದ ಆರೋಪಿ ನೀಲೇಶ್ವರ ಆಲಿಂಕೀಲ್ ಚೀಟ್ಟಪುರಂ ನಾಲುಪುರಪಾಟ್ಟಿಲ್ ನಿವಾಸಿ ಪಿ.ಎ. ಸಮೀರ್ (39) ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬೈಕ್‌ಗಳ ಪೈಕಿ ಎರಡನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಕಳೆದ ಹತ್ತು ದಿನಗಳಲ್ಲಾಗಿ ಈತ ಹಲವೆಡೆಗಳಿಂದಾಗಿ ನಾಲ್ಕು ದ್ವಿಚಕ್ರ ವಾಹನಗಳನ್ನು ಕಳವುಗೈದಿರುವುದಾಗಿಯೂ, ಅದನ್ನು ಪತ್ತೆಹಚ್ಚಲು ಆತನನ್ನು ನ್ಯಾಯಾಂಗ ಬಂಧನದಿಂದ ಮತ್ತೆ ಕಸ್ಟಡಿಗೆ ಪಡೆದುಕೊಂಡು ಸಮಗ್ರ ವಿಚಾರಣೆಗೊಳಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ರೈಲು ನಿಲ್ದಾಣ ಪರಿಸರ, ಕರಂದಕ್ಕಾಡು ಮತ್ತು ನಗರದ ಹೊಸ ಬಸ್ ನಿಲ್ದಾಣ ಪರಿಸರದಿಂದ ಮಾತ್ರವಲ್ಲ ಮಂಗಳೂರಿನ ಬಂದರಿನಿಂದಲೂ  ಈತ ದ್ವಿಚಕ್ರ ವಾಹನಗಳನ್ನು ಕಳವುಗೈದಿದ್ದಾನೆ. ಬೈಕ್‌ಗಳು ಕಳವುಗೈಯ್ಯಲ್ಪಡುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ತನಿಖೆಗಾಗಿ ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಮೆಲ್ವಿನ್ ಜೋಸ್‌ರ ನೇತೃತ್ವದಲ್ಲಿ ಎಸ್‌ಐ ಪಿ.ವಿ. ಮನು ಇತರ ಪೊಲೀಸರಾದ ಪ್ರಜಿತ್, ಸುಭಾಷ್, ಕೆ.ವಿ. ರತೀಶ್, ಲುಖ್ಮಾನ್, ವಿಜಿತ್, ಶ್ಯಾಮ್ ಮತ್ತು  ಪಿ.ಪಿ. ವಿಪಿನ್ ಎಂಬವರನ್ನೊಳಗೊಂಡ ವಿಶೇಷ ಪೊಲೀಸರ ತಂಡಕ್ಕೆ ರೂಪು ನೀಡಲಾಗಿತ್ತು. ಕಳವು ನಡೆದ ಸ್ಥಳ ಮತ್ತು ಪರಿಸರ ಪ್ರದೇಶಗಳ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಲಾದ ತನಿಖೆಯಲ್ಲಿ ಆರೋಪಿಯ ಗುರುತು ಹಚ್ಚಲು ಸಾಧ್ಯವಾಯಿತು. ಅದರ ಜಾಡು ಹಿಡಿದು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದಾಗ ಕಾಸರಗೋಡು ಹಳೇ ಬಸ್ ನಿಲ್ದಾಣದಿಂದ ಆರೋಪಿ ಜನರಲ್ ಆಸ್ಪತ್ರೆಯತ್ತ ನಡೆದುಕೊಂಡು ಹೋಗುತ್ತಿರುವುದನ್ನು ಪತ್ತೆಹಚ್ಚಿ ಆತನನ್ನು ಸೆರೆ ಹಿಡಿಯುವಲ್ಲಿ ಸಫಲರಾದರು.

RELATED NEWS

You cannot copy contents of this page