ಕಾಸರಗೋಡು: ಪೆರಿಯ ಮೂನಾಂಕಡವುನಲ್ಲಿ ಮತ್ತೊಂದು ವಾಹನ ಅಪಘಾತಕ್ಕೀಡಾಗಿದೆ. ಗೊಬ್ಬರ ಸಾಗಾಟ ಲಾರಿ ನಿಯಂತ್ರಣ ತಪ್ಪಿ ಕಳೆದ ಆದಿತ್ಯವಾರ ಗೃಹಪ್ರವೇಶ ನಡೆದ ಮನೆಯ ಅಂಗಳಕ್ಕೆ ಮಗುಚಿ ಬಿದ್ದಿದೆ. ಇದರಿಂದ ಕಣ್ಣೂರು ಪಿಣರಾಯಿ ನಿವಾಸಿಯಾದ ಚಾಲಕ ಗಾಯಗೊಂಡಿದ್ದಾನೆ. ಈತನನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 12.20ರ ವೇಳೆ ಲಾರಿ ಅಪಘಾತಕ್ಕೀಡಾಗಿದೆ. ಕುಂಡಂಕುಳಿ ಭಾಗಕ್ಕೆ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮೂನಾಂಕಡವು ಇಳಿಜಾರು ಪ್ರದೇಶಕ್ಕೆ ತಲುಪಿದಾಗ ನಿಯಂತ್ರಣ ತಪ್ಪಿ ಮುಹಮ್ಮದ್ ಎಂಬವರ ಮನೆಯಂಗಳಕ್ಕೆ ಮಗುಚಿ ಬಿದ್ದಿದೆ. ಅಪಘಾತದಿಂದ ಲಾರಿ ಪೂರ್ಣವಾಗಿ ಹಾನಿಗೀಡಾಗಿದೆ. ಲಾರಿಯೊಳಗೆ ಸಿಲುಕಿದ ಚಾಲಕನನ್ನು ನಾಗರಿಕರು ಭಾರೀ ಪ್ರಯತ್ನಪಟ್ಟು ರಕ್ಷಿಸಿದ್ದಾರೆ. ಬಳಿಕ ಚಾಲಕನನ್ನು ಇಂದಿರಾನಗರದ ಆಸ್ಪತ್ರೆಗೆ ತಲುಪಿಸಿ ಅಲ್ಲಿಂದ ಕಣ್ಣೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಿನ್ನೆ ಮುಂಜಾನೆಯೂ ಮೂನಾಂಕಡವು ಏರು ರಸ್ತೆಯಲ್ಲಿ ವಾಹನವೊಂದು ಅಪಘಾತಕ್ಕೀ ಡಾಗಿತ್ತು. ಸುಳ್ಯದಿಂದ ಕೋಳಿಗಳ ಸಹಿತ ಕಾಞಂಗಾಡ್ ಭಾಗಕ್ಕೆ ತೆರಳುತ್ತಿದ್ದ ಪಿಕಪ್ ಅಪಘಾತಕ್ಕೀ ಡಾಗಿತ್ತು. ಪಿಕಪ್ ಕಂದಕಕ್ಕೆ ಉರುಳ ದಿರುವುದರಿಂದ ಭಾರೀ ಅಪಾಯ ವೊಂದು ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ. ಮೂನಾಂಕಡವು ಏರು ರಸ್ತೆಯಲ್ಲಿ ಈ ಹಿಂದೆಯೂ ಅಪಘಾತವುಂಟಾಗಿದ್ದು ಹಲವರಿಗೆ ಜೀವಹಾನಿ ಸಂಭವಿಸಿತ್ತು. ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂ ಡಿದ್ದರು. ರಸ್ತೆ ನಿರ್ಮಾಣದಲ್ಲಿ ಅವೈಜ್ಞಾನಿಕ ಕ್ರಮವೇ ಅಪಘಾತ ಗಳಿಗೆ ಕಾರಣವಾಗಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ನಾಗರಿಕರು ಹಲವು ಬಾರಿ ರಸ್ತೆ ತಡೆ ಸಹಿತ ಚಳವಳಿ ನಡೆಸಿದ್ದರು. ಈ ವೇಳೆ ಸಮಸ್ಯೆಗೆ ಪರಿಹಾರಕಾ ಣುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮವುಂಟಾಗಿಲ್ಲವೆಂದು ನಾಗರಿಕರು ಹೇಳುತ್ತಿದ್ದಾರೆ. ಇಲ್ಲಿ ಪದೇ ಪದೇ ಅಪಘಾತ ಸಂಭವಿಸುವುದನ್ನು ತಪ್ಪಿಸಲು ಬೇಕಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅನಿರ್ಧಿಷ್ಟಾವಧಿ ಚಳವಳಿ ನಡೆಸಲು ನಾಗರಿಕರು ಆಲೋಚಿಸುತ್ತಿದ್ದಾರೆ.






