ಕಾಸರಗೋಡು: ಸಂರಕ್ಷಿತ ಅರಣ್ಯದಿಂದ ಜಿಂಕೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾಡಿದ ಪ್ರಕರಣದಲ್ಲಿ ಸೆರೆಗೀಡಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕರಿಕೆ ನಿವಾಸಿಗಳಾದ ಎಂ.ಎ. ಸುಬೀರ್ (46), ನೌಫಲ್ (37) ಎಂಬಿವರು ಸೆರೆಗೀಡಾದ ಆರೋಪಿಗ ಳಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಆರೋಪಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಕಳೆದ ಸೆಪ್ಟಂಬರ್ 10ರಂದು ಪನತ್ತಡಿ ಸಂರಕ್ಷಿತ ಅರಣ್ಯಕ್ಕೆ ತಂಡವೊಂದು ನುಗ್ಗಿದೆಯೆಂಬ ಗುಪ್ತ ಮಾಹಿತಿಯ ಆಧಾರದಲ್ಲಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಒಳಗೊಂಡ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಜಿಂಕೆಯನ್ನು ಬೇಟೆಯಾಡಿರುವುದು ತಿಳಿದುಬಂದಿದೆ. ಕಾಡಿನಿಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಂಡು ತಂಡ ಪರಾರಿಯಾಗಲು ಪ್ರಯತ್ನಿಸಿತ್ತು. ಈ ವೇಳೆ ಓರ್ವನನ್ನು ಅಧಿಕಾರಿಗಳು ಸೆರೆಹಿಡಿದಿದ್ದರು. ಈತನ ಕೈಯಿಂದ ನಾಡಕೋವಿ, ಮದ್ದುಗುಂಡು, ಎರಡು ಚಾಕುಗಳು,ಎರಡು ಟಾರ್ಚ್ಗಳನ್ನು ವಶಪಡಿಸಲಾಗಿತ್ತು. ಅನಂತರ ೪೦ ಕಿಲೋ ಜಿಂಕೆ ಮಾಂಸವನ್ನು ಆರೋಪಿಯ ಮನೆಯಿಂದ ಪತ್ತೆಹಚ್ಚಲಾಗಿತ್ತು. ಬಳಿಕ ಆರೋಪಿಯನ್ನು ತನಿಖೆಗೊಳ ಪಡಿಸಿದಾಗ ಇತರ ಬೇಟೆಗಾರರ ಕುರಿತು ಮಾಹಿತಿ ಲಭಿಸಿತ್ತು. ಅಷ್ಟರಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ನ್ಯಾಯಾಲಯವನ್ನು ಸಮೀಪಿಸಿದ್ದರು. ಅವರ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಕಾಞಂಗಾಡ್ ಫಾರೆಸ್ಟ್ ಆಫೀಸರ್ ಆರ್. ರಾಹುಲ್ರ ಮುಂದೆ ಶರಣಾಗಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಆರೋಪಿಗಳಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.






