ಶಂಪಾ ಪ್ರತಿಷ್ಠಾನದಿಂದ ಪೊಸಡಿಗುಂಪೆಯಲ್ಲಿ ಕೆ.ವಿ. ತಿರುಮಲೇಶ್, ಟಿ. ಕೇಶವ ಭಟ್ಟ, ಕೆ.ಟಿ.ಗಟ್ಟಿ ಸಾಹಿತಿ-ಸಾಹಿತ್ಯ ಸಂಸ್ಮರಣೆ ಅ.31ರಂದು

ಉಪ್ಪಳ: ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಕೀರ್ತಿ ಶೇಷರಾದ ಪ್ರೊ. ಕೆ .ವಿ ತಿರುಮಲೇಶ್, ಪ್ರೊ.ಟಿ ಕೇಶವ ಭಟ್ಟ ಪ್ರೊ.ಕೆ.ಟಿ ಗಟ್ಟಿ ಸಾಹಿತಿ- ಸಾಹಿತ್ಯ- ಸಂಸ್ಮರಣಾ ಕಾರ್ಯಕ್ರಮ ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ಅ.31ರಂದು ನಡೆಯಲಿದೆ. ಕಾರ್ಯಕ್ರಮವನ್ನು ಬೆಳಗ್ಗೆ 1೦ ಗಂಟೆಗೆ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ ಉದ್ಘಾಟಿಸುವರು. ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಪಿ. ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯಕಟ್ಟೆ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪತ್ರಕರ್ತ ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿರುವರು.
ಬಳಿಕ ನಡೆಯುವ ವಿಚಾರ ಸಂಕಿರಣದಲ್ಲಿ’ ಕನ್ನಡ ಸಾಹಿತ್ಯಕ್ಕೆ ಕೆ.ವಿ ತಿರುಮಲೇಶರ ಕೊಡುಗೆ’ಯ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ,’ಜನಪದ ಸಾಹಿತ್ಯ- ಶಾಸ್ತ್ರ ಸಾಹಿತ್ಯಕ್ಕೆ ಪ್ರೊ .ಟಿ. ಕೇಶವ ಭಟ್ಟರ ಕೊಡುಗೆ ‘ಯ ಕುರಿತು ಸಾಹಿತಿ, ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್, ಪ್ರೊ. ಕೆ.ಟಿ ಗಟ್ಟಿ ಅವರ ಕಾದಂಬರಿಗಳ ಕುರಿತು ಕವಯತ್ರಿ ,ಶಿಕ್ಷಕಿ ಕವಿತಾ ಕೂಡ್ಲು ಉಪನ್ಯಾಸ ನೀಡುವರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ , ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಬಜಕ್ಕೂಡ್ಲು ಸಮಾರೋಪ ಭಾಷಣ ಮಾಡುವರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಾಹಿತಿ, ಪ್ರಾಧ್ಯಾಪಕ ಟಿ .ಎ.ಎನ್.ಖಂಡಿಗೆ ,ಸುಭಾಷ್ ಪೆರ್ಲ ಅತಿಥಿಗಳಾಗಿರುವರು. ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ, ಸಾಹಿತಿ ಡಾ .ಪ್ರಮೀಳಾ ಮಾಧವ, ಡಾ .ಎಸ್.ಎಲ್ ಮಂಜುನಾಥ್, ವಿಶಾಲಾಕ್ಷ ಪುತ್ರಕಳ, ಡಾ. ಶಾರದ ,ಡಾ .ಯು. ಮಹೇಶ್ವರಿ ಉಪಸ್ಥಿತರಿರುವರು

RELATED NEWS

You cannot copy contents of this page