ಬದಿಯಡ್ಕ: ಬಿದ್ದು ಸಿಕ್ಕಿದ ಹಣ ಒಳಗೊಂಡ ಪರ್ಸನ್ನು ಅದರ ಮಾಲಕನಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ತೋರಿಸಿದ ಬದಿಯಡ್ಕದ ಇಬ್ಬರು ವ್ಯಾಪಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಿಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಬದಿಯಡ್ಕ ಬಸ್ ನಿಲ್ದಾಣ ಬಳಿಯ ವ್ಯಾಪಾರ ಸಂಸ್ಥೆಯಲ್ಲಿ ಹತ್ತು ದಿನಗಳ ಹಿಂದೆ ವ್ಯಾಪಾರಿಯಾದ ಸಿದ್ದೀಕ್ ಹಾಗು ಟಿ ಸ್ಟಾಲ್ ಮಾಲಕ ಅಶ್ರಫ್ ನೆಕ್ರಾಜೆ ಎಂಬಿವರಿಗೆ ಹಣ ಇದ್ದ ಲೇಡೀಸ್ ಪರ್ಸ್ ಬಿದ್ದು ಸಿಕ್ಕಿತ್ತು. ಈ ವಿಷಯವನ್ನು ಅವರು ಸಾಮಾಜಿಕ ಕಾರ್ಯಕರ್ತ ಹಾರಿಸ್ ಬಿ. ಡಿ. ಕೆ ಅವರಲ್ಲಿ ತಿಳಿಸಿದ್ದರು. ಹಾರಿಸ್ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು. ಈ ಮೂಲಕ ಪರ್ಸ್ ನ ಮಾಲಕರನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಬಳಿಕ ಅವರನ್ನು ಅಂಗಡಿಗೆ ಕರೆಸಿ ಪರ್ಸ್ ಹಸ್ತಾಂತರಿಸಲಾಯಿತು. ಈ ವಿಷಯ ತಿಳಿದ ನಾಗರಿಕರು ಸಿದ್ದೀಕ್, ಹಾರಿಸ್, ಅಶ್ರಫ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ.






