ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಪಡಿಸಿ ಚಾಲಕನನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಲಾರಿಯ ಚಾಲಕ ಹಾಗೂ ಮಾಲಕನ ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿದೆ. ಬಂಬ್ರಾಣ ನಿವಾಸಿ ಮೊಹಮ್ಮದ್ ತಸ್ರೀಫ್ (27) ಬಂಧಿತ ಲಾರಿ ಚಾಲಕನಾಗಿದ್ದಾನೆ.
ಕುಂಬಳೆ ಎಸ್ಐ ಎಸ್. ಅನೂಪ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ರಾತ್ರಿ ಮಡಿಮೊಗರು ಮೈಮೂನ ನಗರದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಹೊಯ್ಗೆ ಹೇರಿದ ಲಾರಿ ತಲುಪಿತ್ತು. ಅದನ್ನು ಪರಿಶೀಲಿಸಿದಾಗ ಮೊಗ್ರಾಲ್ ಹೊಳೆಯಿಂದ ಅನಧಿಕೃತವಾಗಿ ತೆಗೆದ ಹೊಯ್ಗೆಯೆಂದು ತಿಳಿದು ಬಂದಿತ್ತು. ಇದರಂತೆ ಹೊಯ್ಗೆ ಹಾಗೂ ಲಾರಿಯನ್ನು ಕಸ್ಟಡಿಗೆ ತೆಗೆದು ಚಾಲಕನನ್ನು ಬಂಧಿಸಲಾಗಿದೆ. ಈತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಎಸ್ಐ ಜತೆಗೆ ಎಎಸ್ಐ ಅತುಲ್ ರಾಂ, ಪೊಲೀಸ್ ಸಜೀಶ್, ಚಾಲಕ ಅಖಿಲ್ ಇದ್ದರು.






