ಕುಂಬಳೆ: ವಾಹನದ ದಂಡ ಹೆಸರಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ವಂಚಕರು 41,329 ರೂ. ಎಗರಿಸಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ನಾಯ್ಕಾಪು ನಾರಾಯಣಮಂಗಲ ಹೌಸ್‌ನ ಅಕ್ಷತಾ ಕೆ ಎಂಬವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಲಾಗಿದೆ. ನನ್ನ ಮೊಬೈಲ್ ಫೋನ್‌ಗೆ ವಾಹನದ ದಂಡ ಪಾವತಿಸಬೇಕೆಂಬ ಹೆಸರಲ್ಲಿ ಲಿಂಕ್ ಸಹಿತ ಸಂದೇಶ ಬಂದಿತ್ತೆಂದೂ ನನ್ನ ಫೋನ್‌ನೊಂದಿಗೆ ಲಿಂಕ್ ಮಾಡಲಾಗಿದ್ದ ನನ್ನ ಬ್ಯಾಂಕ್ ಖಾತೆಯಿಂದ ನ. 5ರಿಂದ 7ರ ನಡುವಿನ ಅವಧಿಯಲ್ಲ್ಲಿ ಸೈಬರ್ ವಂಚಕರು ಹಲವು ಕಂತುಗಳಲ್ಲಾಗಿ ಒಟ್ಟು 41,329 ರೂ. ಎಗರಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಕ್ಷತಾ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.






