ಕಳ್ಳಸಾಗಾಟ: 1.37 ಕೋಟಿ ರೂ.ಗಳ  ಚಿನ್ನ ಸಹಿತ ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗದ ಡಿಆರ್‌ಐ ನಡೆಸಿದ ಕಾರ್ಯಾಚರಣೆಯಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ನೌಶಾದ್ (43) ಎಂಬಾತನನ್ನು ಡಿಆರ್‌ಐ ವಶಕ್ಕೆ ತೆಗೆದು ಸಮಗ್ರ ವಿಚಾರಣೆ ಆರಂಭಿಸಿದೆ.

ನೌಶಾದ್ ವಿದೇಶದಿಂದ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ಆ ವೇಳ ಚಿನ್ನ ಕಳ್ಳಸಾಗಾಟದ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಡಿಆರ್‌ಐ ತಂಡ ವಿಮಾನ ನಿಲ್ದಾಣದಲ್ಲಿ  ನೌಶಾದ್‌ನ ದೇಹ ತಪಾಸಣೆ ನಡೆಸಿದಾಗ ಆತ ಧರಿಸಿದ್ದ  ಬೂಟಿನೊಳಗೆ ಸತು ಮಿಶ್ರಿತ 1.085 ಕಿಲೋ ಚಿನ್ನ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ವಶಕ್ಕೆ ತೆಗೆದು ಡಿಆರ್‌ಐ ತಮ್ಮ ಕಚೇರಿಗೆ ಸಾಗಿಸಿ ತೀವ್ರ ವಿಚಾರಣೆ  ಆರಂಭಿಸಿದೆ. ಈ ಚಿನ್ನವನ್ನು  ಕಾಸರಗೋಡಿಗೆ ಅಥವಾ ಬೇರೆಡೆಗೆ ಸಾಗಿಸುವ ಯತ್ನ ನಡೆಸಲಾಗಿತ್ತೆಂಬ ಬಗ್ಗೆಯೂ ತಂಡ ತನಿಖೆ ನಡೆಸುತ್ತಿದೆ.

ಇದೇ ರೀತಿ ಈ ತಿಂಗಳ 7ರಂದು 1.67 ಕೋಟಿ ರೂ. ಮೌಲ್ಯದ ಚಿನ್ನವನ್ನು ಡಿಆರ್‌ಐ ವಶಪಡಿಸಿಕೊಂಡಿತ್ತು. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಮೊಹಮ್ಮದ್ ಅಸರುದ್ದೀನ್ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆತ ಚಿನ್ನವನ್ನು ಹ್ಯಾಂಡ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದನು.  ಅದಾದ ಬೆನ್ನಲ್ಲೇ ಕಾಸರಗೋಡು ನಿವಾಸಿಯಾದ ಇನ್ನೋರ್ವನಿಂದ  ಚಿನ್ನ ಪತ್ತೆಹಚ್ಚಲಾಗಿದೆ.

You cannot copy contents of this page