ಬತ್ತಿದ ಕೊಡಂಗೆ ಹೊಳೆ: ಮಂಗಲ್ಪಾಡಿ ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ವ್ಯಾಪಕ
ಉಪ್ಪಳ: ಕೊಡಂಗೆ ಹೊಳೆ ಬತ್ತಿ ಬರಡಾಗಿದ್ದು, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆ ೫ರಿಂದ ೭ ದಿನಕ್ಕೊಮ್ಮೆ ಸೀಮಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಡಂಗೆ ಹೊಳೆಯಲ್ಲಿ ನಿರ್ಮಿಸಲಾದ ಕುಡಿಯುವ ನೀರು ಯೋಜನೆಯ ಬಾವಿಯಿಂದ ಬೇಕೂರು ಸಬ್‌ಸ್ಟೇಶನ್ ಬಳಿಯಿರುವ ಟ್ಯಾಂಕ್‌ಗೆ ನೀರು ಸರಬರಾಜು ಮಾಡಿ ಅಲ್ಲಿಂದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ನೂರಾರು ಮನೆಗಳಿಗೆ ವಿತರಿಸಲಾಗುತ್ತಿದೆ. ಎರಡು ದಿನಗಳಿಗೊಮ್ಮೆ ವಿತರಣೆಗೊಳ್ಳುತ್ತಿದ್ದ ನೀರು ಕಳೆದ ಕೆಲವು ದಿನಗಳಿಂದ ಮೊಟಕುಗೊಂಡಿದೆ. ಇದರಿಂದಾಗಿ ನಳ್ಳಿ ನೀರನ್ನೇ ಆಶ್ರಯಿಸಿ ಇರುವ ಕುಟುಂಬಗಳು ಸಮಸ್ಯೆಕ್ಕೀಡಾಗಿವೆಯೆಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ವರ್ಷ ಎಪ್ರಿಲ್ ತಿಂಗಳವರೆಗೆ ನೀರಿದ್ದರೆ ಈ ವರ್ಷ ಮಾರ್ಚ್ ಕೊನೆಯಲ್ಲೇ ಹೊಳೆಯಲ್ಲಿ ನೀರು ಬತ್ತಿ ಮೈದಾನದಂತಾಗಿದೆ. ಬಾವಿಯಲ್ಲೂ ನೀರು ಕಡಿಮೆಯಿರುವ ಕಾರಣ ಇದ್ದ ನೀರನ್ನು ರಾತ್ರಿ ಹಗಲು ಟ್ಯಾಂಕ್‌ನಲ್ಲಿ ತುಂಬಿಸಿ ವಿವಿಧ ಕಡೆಗೆ ವಿತರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಕುಡಿಯುವ ನೀರನ್ನು ತೋಟ ಹಾಗೂ ಇತರ ಕೃಷಿ ಕೆಲಸಗಳಿಗೆ ಕೆಲವರು ಬಳಸುತ್ತಿರುವುದಾಗಿಯೂ ಹೇಳಲಾಗುತ್ತಿದೆ. ಪಂಚಾಯತ್‌ನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ವಾಹನದಲ್ಲಿ ನೀರು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.