ನೈಸರ್ಗಿಕ ತೋಡಿಗೆ ಮಣ್ಣು ತುಂಬಿಸಿ ಸಮತಟ್ಟುಗೊಳಿಸುವ ಯತ್ನ ವಿರುದ್ಧ ವ್ಯಾಪಕ ವಿರೋಧ: ಸ್ಥಳಕ್ಕೆ ಭೇಟಿ ನೀಡಿದ ಸದಸ್ಯೆಯಿಂದ  ಗ್ರಾಮ ಕಚೇರಿ, ಪಂಚಾಯತ್‌ಗೆ ದೂರು

ನೀರ್ಚಾಲು: ಬೇಳ ಗ್ರಾಮ ಕಚೇರಿ ವ್ಯಾಪ್ತಿಯ ಪುದುಕೋಳಿ ಸಂಕದ ಅಡಿಯ ನೈಸರ್ಗಿಕ `ಕೊರಂಗತೋಡು’ ವ್ಯಕ್ತಿಯೋರ್ವರ ನೇತೃತ್ವದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆಯೆಂದು ದೂರಲಾಗಿದೆ.
ಅನಾದಿ ಕಾಲದಿಂದಲೂ ಮಳೆನೀರು ಹರಿದು ಹೋಗುವ ನೈಸರ್ಗಿಕ ತೋಡು ಇದಾಗಿದ್ದು, ಈ ತೋಡಿಗೆ ತಲ್ಪಣಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಮಳೆನೀರು ಹರಿದು ಬಂದು ಸೇರುತ್ತದೆ. ಇದರ ಸಮೀಪದ ಕೃಷಿ ಭೂಮಿಗಳಿಗೆ ತೋಡಿನ ನೀರು ಉಪಕಾರಪ್ರದವಾಗಿದೆ. ಆದರೆ, ತೋಡಿಗೆ ಮಣ್ಣನ್ನು ತುಂಬಿಸಿ ಮುಚ್ಚಿರುವುದು ಕೃಷಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೋಡನ್ನು ಮಣ್ಣು ಹಾಕಿ ಮುಚ್ಚಿರುವುದರ ವಿರುದ್ಧ ಅವರು ಗ್ರಾಮಾಧಿಕಾರಿ ಹಾಗೂ ಪಂಚಾಯತ್‌ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಭೂ ಮಾಫಿಯಾದ ದೌರ್ಜನ್ಯಕ್ಕೆ ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಪುದುಕೋಳಿ ಸಾಕ್ಷಿ ಎಂದು ಸ್ಥಳೀಯರು ದೂರುತ್ತಾರೆ. ಶತಮಾನಗಳಿಂದ ನೈಸರ್ಗಿಕವಾಗಿ ಹರಿಯುತ್ತಿದ್ದ ಐತಿಹಾಸಿಕ ತೋಡನ್ನು ಮಣ್ಣು ತುಂಬಿಸಿ ಸಮಾಧಿ ಮಾಡಲಾಗಿದೆ. ಭೂಮಿಯನ್ನು ತುಂಡರಿಸಿ ನಿವೇಶನ ಗಳನ್ನಾಗಿ ಮಾರಾಟ ಮಾಡುವ ದುರುದ್ದೇಶದಿಂದ ಜಲಮೂಲವನ್ನೇ ನಾಶಪಡಿಸಿರುವುದು ಸ್ಥಳೀಯರ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿತ್ತು.
ಪುದುಕೋಳಿ ಹಾಗೂ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದ ಕೃಷಿ ಭೂಮಿಗೆ ತಂಪು ನೀಡುತ್ತಾ, ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಈ ತೋಡು ಮಹತ್ವದ ಪಾತ್ರ ವಹಿಸಿತ್ತು. ಆದರೆ, ಭೂ ಮಾಫಿಯಾದ ಕಣ್ಣು ಈ ಜಾಗದ ಮೇಲೆ ಬಿದ್ದಿದ್ದು, ಬೃಹತ್ ಯಂತ್ರಗಳನ್ನು ಬಳಸಿ ರಾತ್ರೋರಾತ್ರಿ ತೋಡಿಗೆ ಮಣ್ಣು ಸುರಿದು ಸಮತಟ್ಟುಗೊಳಿಸಲಾಗಿದೆ.
ನೈಸರ್ಗಿಕ ಜಲಮೂಲವನ್ನು ಮುಚ್ಚಿರುವುದರಿಂದ ಮುಂಬರುವ ಮಳೆಗಾಲದಲ್ಲಿ ಪುದುಕೋಳಿ ಪರಿಸರ ನಲುಗಿ ಹೋಗುವ ಭೀತಿ ಎದುರಾಗಿದೆ. ಹರಿದು ಹೋಗಲು ದಾರಿಯಿಲ್ಲದೆ ಅಪಾರ ಪ್ರಮಾಣದ ಮಳೆ ನೀರು ನೀರ್ಚಾಲು-ಮಾನ್ಯ ಮುಖ್ಯ ರಸ್ತೆಯ ಮೇಲೆ ಹರಿಯ ಲಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳುವ ಜೊತೆಗೆ ತಗ್ಗು ಪ್ರದೇಶಗಳು ದ್ವೀಪಗಳಾಗಲಿವೆ ಎಂದು ಆತಂಕಪಡಲಾಗಿದೆ. ನೀರು ಸಮೀಪದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮನೆಗಳಿಗೆ ನುಗ್ಗುವ ಅಪಾಯವಿದೆ. ಅಲ್ಲದೆ ಸುತ್ತಮುತ್ತಲಿನ ನೂರಾರು ಎಕರೆ ಅಡಿಕೆ ಮತ್ತು ತೆಂಗಿನ ತೋಟಗಳು ನಾಶವಾಗುವ ಆತಂಕ ರೈತರನ್ನು ಕಾಡುತ್ತಿದೆ.

RELATED NEWS

You cannot copy contents of this page