ಉಪ್ಪಳ: ಬಿಜೆಪಿ ತಂಡ ಜಿಲ್ಲಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ, ಗ್ರಾಮ ಅಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ತಲುಪಿದರು. ಬಿಜೆಪಿ ತಂಡ ಮಂಗಲ್ಪಾಡಿ ಪಂಚಾಯತ್, ಶಾರದನಗರ, ಮೂಸೋಡಿ ಮತ್ತು ಮಣಿಮುಂಡದಲ್ಲಿ ಕಡಲ್ಕೊರೆತ ತೀವ್ರವಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿದೆ. ಮನೆಗಳು ಸಮುದ್ರದಲ್ಲಿ ಮುಳುಗುವ ಹಂತದಲ್ಲಿರುವ ಈ ಪ್ರದೇಶಗಳಿಗೆ ಶಾಸಕರು ಅಥವಾ ಪಂಚಾಯತ್ ಸದಸ್ಯರು ಈ ಮೊದಲು ಭೇಟಿ ನೀಡದಿರುವುದನ್ನು ಬಿಜೆಪಿ ಖಂಡಿಸಿದೆ. ಈ ಸಮಯದಲ್ಲಿ ಜನರ ಜೀವ, ಆಸ್ತಿ ಮತ್ತು ವಸತಿ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿ.ವಿಕ್ರಮ್ ಪೈ ಹೇಳಿದರು. ಮನೆ ಕಳೆದುಕೊಂಡ ಮೀನುಗಾರರಿಗೆ ತಕ್ಷಣವೇ ಮನೆ ಗಳನ್ನು ನಿರ್ಮಿಸಿಕೊಡಬೇಕು ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಶೀಘ್ರವೇ ಒದಗಿಸಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಮತ್ತು ಸತೀಶ್ ಚಂದ್ರ ಭಂಡಾರಿ ಒತ್ತಾಯಿಸಿದರು. ಒಂದು ವಾರದ ಹಿಂದೆ ಒಬಿಸಿ ಮೋರ್ಚಾ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಆದರೆ ಪರಿಸ್ಥಿತಿ ಹೆಚ್ಚು ಅಪಾಯಕಾರಿಯಾಗಿದ್ದು, ಮೀನುಗಾರರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸಬೇಕೆಂದು ಗ್ರಾಮ ಕಚೇರಿಯಿಂದ ಸೂಚನೆ ಬಂದಿತ್ತು. ಹೆಚ್ಚಿನವರು ಮೀನುಗಾರರಾಗಿರುವುದರಿಂದ ಬೇರೆ ಸ್ಥಳಕ್ಕೆ ಹೋಗಿ ವಾಸಿಸಿದರೆ ಅವರ ದೈನಂದಿನ ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಈ ಪ್ರದೇಶದಲ್ಲಿಂÄೆÄÃ ಹೊಸ ಮನೆ ನಿರ್ಮಿಸಿಕೊಡಬೇಕೆಂದು ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಒತ್ತಾಯಿಸಿದರು. ಸ್ಥಳೀಯ ಬಿಜೆಪಿ ಮುಖಂಡರಾದ ಶಶಿ, ಹರಿ, ರಂಜಿತ್, ಅಶೋಕ್, ಜ್ಯೋತಿರಾಜ್, ಪ್ರಶಾಂತ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.





