ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪ ಭಾಸ್ಕರನಗರದಲ್ಲಿ ಪದೇ ಪದೇ ವಾಹನಗಳು ಅಪಘಾತಕ್ಕೀಡಾಗು ತ್ತಿರುವುದು ಪ್ರಯಾಣಿಕರು ಹಾಗೂ ನಾಗರಿಕರಿಗೆ ಆತಂಕ ಮೂಡಿಸಿದೆ. ನಿನ್ನೆ ಮಧ್ಯಾಹ್ನವೂ ಇಲ್ಲಿ ಕಾರೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಿಯಂತ್ರಣ ತಪ್ಪಿದ ಕಾರು ತೋಡಿಗೆ ಮಗುಚಿಬಿದ್ದಿದೆ. ಇದರಿಂದ ಗಾಯಗೊಂಡ ಕಳತ್ತೂರು ಉಳ್ವಾರಿನ ಮುಹಮ್ಮದ್, ಪತ್ನಿ ಮರಿಯುಮ್ಮ, ಪುತ್ರ ಜಲೀಲ್ ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಕುಂಬಳೆಯಿಂದ ನಾಯ್ಕಾಪು ಭಾಗಕ್ಕೆ ಇವರು ಪ್ರಯಾಣಿಸುತ್ತಿದ್ದರು. ಕಳೆದ ಒಂದು ವರ್ಷದೊಳಗೆ ಇದೇ ಸ್ಥಳದಲ್ಲಿ ೨೫ಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೀಡಾಗಿವೆ. ರಸ್ತೆ ನಿರ್ಮಾಣ ದಲ್ಲಿ ಉಂಟಾಗಿರುವ ಲೋಪವೇ ನಿರಂತರ ಅಪಘಾತಗಳಿಗೆ ಕಾರಣ ವಾಗುತ್ತಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವುಬಾರಿ ದೂರು ನೀಡಲಾ ಗಿದೆಯಾದರೂ ಅಪಘಾತ ತಡೆಗಟ್ಟಲು ಯಾವುದೇ ಕ್ರಮ ಉಂಟಾಗಿಲ್ಲ.







