ಕಾಸರಗೋಡು: ನೈತಿಕ ಗೂಂಡಾಗಿರಿ ಬೆದರಿಕೆಯೊಡ್ಡಿ ಯುವತಿ ಹಾಗೂ ಆಕೆಯ ಸ್ನೇಹಿತನ ನಗ-ನಗದು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ೫ ಮಂದಿಯನ್ನು ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಪ್ರಮೋದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಪೊವ್ವಲ್‌ನ ಬಿ. ಶರೀಫ್ (೪೨), ಚೆರ್ಕಳ ಸಂತೋಷ್‌ನಗರದ ಮುಹಮ್ಮದ್ ಸಾಲೀಖ್ (22), ಆಲಂಪಾಡಿಯ ಅಬ್ದುಲ್ ರಶೀದ್ (36), ಚೆಂಗಳ ನಾಲ್ಕನೇ ಮೈಲು ನಿವಾಸಿಗಳಾದ ಉಮ್ಮರ್ ಮುಕ್ತಾರ್ (18), ಮುಹಮ್ಮದಲಿ ಶಿಹಾನ್ (20) ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ.
ಕಳೆದ ಜುಲೈ 21ರಂದು ವಿದ್ಯಾ ನಗರ ಠಾಣೆ ವ್ಯಾಪ್ತಿಗೊಳಪಟ್ಟ ವಿವಾಹಿತೆ ಯಾದ ಯುವತಿಯೋರ್ವಳ ಮನೆಗೆ ಸ್ನೇಹಿತ ಬಂದಿದ್ದನು. ಈ ವೇಳೆ ಆ ಮನೆಗೆ ಅಕ್ರಮವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಮತ್ತು ೧೫ ಸಾವಿರ ರೂ. ನಗದು ಎಗರಿಸಿದ್ದರೆಂದೂ ಅನಂತರದ ದಿನಗಳಲ್ಲಿ ಮತ್ತೆ ೪೦ ಸಾವಿರ ರೂಪಾಯಿ ನೀಡಬೇಕೆಂದು ಒತ್ತಾಯಿಸಿ ಬೆದರಿಕೆಯೊಡ್ಡತೊಡಗಿದ್ದರೆಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಸಂಬಂಧ ಇತರ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದ ಒಂದನೇ ಆರೋಪಿ ಬಿ. ಶರೀಫ್ ಅಪಹರಣ, ಕಳವು ಸೇರಿದಂತೆ ಇತರ ಪ್ರಕರಣಗಳಲ್ಲೂ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ಎಸ್‌ಐ ರಮೇಶ್‌ಮುರಳಿ, ಎಎಸ್‌ಐ ಪ್ರದೀಪನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಅಜಯ್ ವಿಲ್ಸನ್, ಬಿ. ಹರೀಶ್ ಎಂಬಿವರಿದ್ದರು.






