ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಯುವಕನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದ ಬಳಿಕ ಆತನನ್ನು ಕೊಲೆಗೈದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ಕುಂಜತ್ತೂರು ಕಣ್ವತೀರ್ಥ ಕುಚ್ಚಿಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಸಿನಾನ್ (26) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈ ವಿಷಯವನ್ನು ಬೆಂಗಳೂರು ವಿಮಾನ ನಿಲ್ದಾಣದ ಎಮಿಗ್ರೇಶನ್ ವಿಭಾಗದ ಅಧಿಕಾರಿಗಳು ತಿಳಿಸಿರುವುದಾಗಿ ಮಂಜೇಶ್ವರ ಪೊಲೀಸರು ಹೇಳಿದ್ದಾರೆ.
ಮೀಯಪದವು ಬಳಿಯ ಮದಂಗಲ್ಲು ಎಂಬಲ್ಲಿನ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (22)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ರಹಿಮಾನ್ ಸಿನಾನ್‌ನನ್ನು ಬಂಧಿಸಲಾಗಿದೆ. 2024 ಮಾರ್ಚ್ 3ರಂದು ರಾತ್ರಿ ಗಲಾಟೆ ನಡೆಸಿದ ಆರೋಪದಂತೆ ಮಂಜೇಶ್ವರ ಪೊಲೀಸರು ಮೊಯ್ದೀನ್ ಆರೀಫ್‌ರನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ ಸಂಬಂಧಿಕನೊರ್ವ ತಲುಪಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದಿದ್ದನು. ೪ರಂದು ಬೆಳಿಗ್ಗೆ ಮೊಯ್ದೀನ್ ಆರಿಫ್ ಮನೆಯಲ್ಲಿ ರಕ್ತವಾಂತಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದುದರಿಂದ ಅನಂತರ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಂದು ಸಂಜೆ ಮೃತದೇಹವನ್ನು ಮನೆಗೆ ತಲುಪಿಸಲಾಯಿತು. ಈ ವೇಳೆ ಮೃತದೇಹದಲ್ಲಿ ಗಾಯಗಳು ಕಂಡುಬಂದಿದ್ದು, ಇದರಿಂದ ನಾಗರಿಕರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಈ ವಿಷಯ ತಿಳಿದು ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ನಡೆಸಿದ ತಪಾಸಣೆ ವೇಳೆ ಮೃತದೇಹದಲ್ಲಿ ಗಾಯಗಳು ಕಂಡುಬಂದಿತ್ತು. ಅನಂತರ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದು ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮೊಯ್ದೀನ್ ಆರಿಫ್‌ರ ಸಾವು ಕೊಲೆಕೃತ್ಯವಾಗಿದೆಯೆಂದು ಸಾಬೀತುಗೊಂಡಿದೆ. ಇದರಿಂದ ಮೊದಲು ಅಸಹಜ ಸಾವೆಂದು ದಾಖಲಿಸಿಕೊಂಡ ಪ್ರಕರಣವನ್ನು ಬಳಿಕ ಕೊಲೆ ಪ್ರಕರಣವಾಗಿ ಬದಲಾಯಿಸಲಾಯಿತು. ಈ ಸಂಬಂಧ ಕುಂಜತ್ತೂರು ಕಣ್ವತೀರ್ಥ ರೈಲ್ವೇ ಗೇಟ್ ಬಳಿಯ ನಿವಾಸಿಗಳಾದ ಶೌಕತ್ ಅಲಿ (39), ಅಬೂಬಕ್ಕರ್ ಸಿದ್ದಿಕ್ (33), ಕಣ್ವತೀರ್ಥ ನಿವಾಸಿ ಅಬ್ದುಲ್ ರಶೀದ್ (28) ಎಂಬಿವರನ್ನು ಬಂಧಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಒಟ್ಟು ೯ ಮಂದಿ ಆರೋಪಿಗಳಿರುವುದಾಗಿ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿತ್ತು. ಉಳಿದ ಆರೋಪಿಗಳಿಗಾಗಿ ಪೊಲೀಸರು ಲುಕೌಟ್ ನೋಟೀಸು ಹೊರಡಿ ಸಿದ್ದರು. ಈ ಪೈಕಿ ಗಲ್ಫ್‌ಗೆ ಪರಾರಿ ಯಾಗಿ ಬಳಿಕ ಊರಿಗೆ ಮರಳುತ್ತಿದ್ದ ವೇಳೆ ಅಬ್ದುಲ್ ರಹಿಮಾನ್ ಸಿನಾನ್‌ನನ್ನು ಬಂಧಿಸಲಾಗಿದೆ.






