ಕಾಸರಗೋಡು: ಆನ್‌ಲೈನ್ ಟ್ರೇಡಿಂಗ್ ಹಾಗೂ ಇತರ ರೀತಿಯ ಆನ್‌ಲೈನ್ ಸೈಬರ್ ವಂಚಕರಿಗೆ ಬಾಡಿಗೆಗೆ ಬ್ಯಾಂಕ್ ಖಾತೆಗಳನ್ನು ನೀಡುವವರನ್ನು ಪತ್ತೆಹಚ್ಚಲು ಪೊಲೀಸರು ನಿನ್ನೆ ಜಿಲ್ಲೆಯಾದ್ಯಂತ ವ್ಯಾಪಕ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಇದರಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಇದರಂತೆ ಮೇಲ್ಪರಂಬ ಠಾಣೆಯಲ್ಲಿ 6, ಕಾಸರಗೋಡು, ವಿದ್ಯಾನಗರ ಠಾಣೆಗಳಲ್ಲಿ ತಲಾ 5, ಹೊಸದುರ್ಗ 4, ಮಂಜೇಶ್ವರ, ಬೇಡಗ, ಚಂದೇರ, ನೀಲೇಶ್ವರ, ವೆಳ್ಳರಿಕುಂಡ್ ಎಂಬೀ ಪೊಲೀಸ್ ಠಾಣೆಗಳಲ್ಲಿ ತಲಾ 1ರಂತೆ ಪ್ರಕರಣ ದಾಖಲಾಗಿದೆ. ಸೈಬರ್ ಪೊಲೀಸರ ಸಹಾಯದಿಂದ ಈ ದಾಳಿ ನಡೆಸಲಾಗಿದೆ.
ದೇಶ ವಿದೇಶಗಳಿಂದಾಗಿ ಕೋಟಿಗಟ್ಟಲೆ ರೂ.ಗಳು ಅನಧಿಕೃತವಾಗಿ ಆನ್‌ಲೈನ್ ಮೂಲಕ ಇಂತಹ ಬಾಡಿಗೆ ಬ್ಯಾಂಕ್ ಖಾತೆಗಳಿಗೆ ಬಂದು ಸೇರಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿ ಕೆಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಸೈಬರ್ ವಂಚಕರು ತಮ್ಮ ಆನ್‌ಲೈನ್ ವಂಚನೆಗಾಗಿ ತಮ್ಮ ಬ್ಯಾಂಕ್ ಖಾತೆಗಳನ್ನು ಉಪಯೋಗಿಸುವ ಬದಲು ಆರ್ಥಿಕ ಆಮೀಷವೊಡ್ಡಿ ವಿದ್ಯಾರ್ಥಿಗಳು, ಯುವಕರು ಮತ್ತು ನಿರುದ್ಯೋಗಿಗಳು ಸೇರಿದಂತೆ ಇತರರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದುಕೊಂಡು ಅದನ್ನು ಉಪಯೋಗಿಸಿ ಆನ್‌ಲೈನ್ ಟ್ರೇಡಿಂಗ್ ಇತ್ಯಾದಿಗಳ ಹೆಸರಲ್ಲಿ ಹಣ ಎಗರಿಸುತ್ತಾರೆ. ಈ ವಂಚನಾ ವ್ಯವಹಾರಕ್ಕೆ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವವರಿಗೆ ಈ ವಂಚನೆ ಜಾಲದವರು ನಿಗದಿತ ಪ್ರಮಾಣದಲ್ಲಿ ಬಾಡಿಗೆ ಮಾತ್ರವಲ್ಲದೆ ಇತರ ಆರ್ಥಿಕ ನೆರವನ್ನೂ ನೀಡುತ್ತಾರೆ. ಒಂದು ವೇಳೆ ಇಂತಹ ವಂಚನೆ ಪತ್ತೆಯಾದಲ್ಲಿ ಅದರ ನಿಜವಾದ ವಂಚಕರು ಪೊಲೀಸರ ಕೈಗೆ ಸಿಲುಕದೆ ಬಾಡಿಗೆಗೆ ಬ್ಯಾಂಕ್ ಖಾತೆ ನೀಡುವವರು ನೇರವಾಗಿ ಅಂತಹ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಆದ್ದರಿಂದ ಹೀಗೆ ಬ್ಯಾಂಕ್‌ಗಳನ್ನು ಬಾಡಿಗೆಗೆ ನೀಡುವವರು ಗರಿಷ್ಠ ಜಾಗ್ರತೆ ಪಾಲಿಸಬೇಕೆಂಬ ನಿರ್ದೇಶವನ್ನು ಇದೇ ಸಂದರ್ಭದಲ್ಲಿ ಪೊಲೀಸರು ನೀಡಿದ್ದಾರೆ.






