ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ ಅಪಾಯ: ಭೀತಿಯೊಡ್ಡುತ್ತಿರುವ ಹೊಂಡ: ಅಧಿಕಾರಿಗಳ ನಿರ್ಲಕ್ಷ್ಯ

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ತೋಡಿದ  ಐದು ಅಡಿ ಆಳದ ಹೊಂಡ ಇದೀಗ ಅಪಾಯ ಭೀತಿಯನ್ನು ಸೃಷ್ಟಿಸುತ್ತಿದೆ. ಒಂದು ವಾರ ಹಿಂದೆ ಕೆಎಸ್‌ಆರ್‌ಟಿಸಿ ನೌಕರರು  ಬೋರ್ಡ್ ಸ್ಥಾಪಿಸಲು ಕೆಲಸಗಾರರನ್ನು ನೇಮಿಸಿ ಹೊಂಡ ತೋಡಿಸಿರುವುದಾಗಿ ಕೆಎಸ್‌ಆರ್‌ಟಿಸಿ ಕಾಂಪ್ಲೆಕ್ಸ್‌ನ ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೊಂಡ ತೋಡಿದ ಬಳಿಕ  ಬೋರ್ಡ್‌ನ್ನು ಕಟ್ಟಡದ ಮೇಲೆ ಸ್ಥಾಪಿಸಲಾಯಿತು. ಆದರೆ ತೋಡಿದ ಹೊಂಡವನ್ನು ಮುಚ್ಚುವ ಕೆಲಸ ನಡೆದಿಲ್ಲ. ಇದರಿಂದ ಈ ಹೊಂಡ ಅಪಾಯಭೀತಿಯೊಡ್ಡುತ್ತಿದೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮೊನ್ನೆಯಷ್ಟೇ ಈ ಹೊಂಡಕ್ಕೆ ಒಂದು ನಾಯಿ ಬಿದ್ದಿದ್ದು ಅದು ಮೇಲೇರ ಲಾಗದೆ ಸಂಕಷ್ಟದಲ್ಲಿದ್ದಾಗ ನಾಗರಿಕರು ಮೇಲಕ್ಕೆತ್ತಿ ಅದರ ಜೀವ ರಕ್ಷಿಸಿದ್ದರು. 

ಸೋಮವಾರದಿಂದ ಶಾಲೆಗಳು   ಆರಂಭಗೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಈ ಭಾಗದಲ್ಲಿ ನಡೆದಾಡಲಿದ್ದಾರೆ. ಅಲ್ಲದೆ ಮಳೆಯೂ ಸುರಿಯತೊಡಗಲಿದ್ದು, ಮಳೆನೀರು ಈ ಹೊಂಡದಲ್ಲಿ ತುಂಬಿ ಕೊಂಡರೆ ಅಪಾಯ ಖಚಿತವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಜನರು ನಡೆದು ಹೋಗುತ್ತಿರುವ ದಾರಿ ಬದಿಯಲ್ಲೇ ಹೊಂಡ ತೋಡಿ ಅದನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸುತ್ತಿರುವ ಕೆಎಸ್‌ಆರ್‌ಟಿ  ಅಧಿಕಾರಿಗಳ ಕರ್ತವ್ಯ ಲೋಪ ಜನರಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

You cannot copy contents of this page