ಪೆರ್ಲ: ಪೆರ್ಲದಿಂದ ಕನ್ನಟಿಕಾನ- ಸ್ವರ್ಗ ದಾರಿಯಾಗಿ ಪುತ್ತೂರಿಗೆ ತೆರಳುವ ಪೆರ್ಲ-ಸೂರಂಬೈಲು ರಸ್ತೆ ಹೊಂಡಗಳಿಂದ ಕೂಡಿ ಸಮಸ್ಯೆಯಲ್ಲಿರುವ ವೇಳೆ ಈ ರಸ್ತೆಯ ಎರಡೂ ಬದಿಗಳಲ್ಲಿ ಒಣಗಿ ನಿಂತಿರುವ ಮರಗಳು ಇನ್ನಷ್ಟು ಸಂಕಷ್ಟ ತಂದಿರಿಸುತ್ತಿದೆ. ಕನ್ನಟಿಕಾನದಲ್ಲಿ ರಸ್ತೆ ಅಂಚಿಗೆ ಒಣಗಿ ನಿಂತಿರುವ ಮರವೊಂದು ಯಾವುದೇ ಸಮಯದಲ್ಲಿ ತುಂಡಾಗಿ ಬೀಳುವ ಅಪಾಯ ಕಂಡು ಬರುತ್ತಿದೆ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಈ ದಾರಿಯಾಗಿ ಸಂಚರಿಸುತ್ತಿದ್ದು, ಅಲ್ಲದೆ ಬಸ್‌ಗಾಗಿ ಕಾದು ನಿಲ್ಲಲು ಈ ಪ್ರದೇಶವನ್ನೇ ಬಳಸಿಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ರೆಂಬೆ ತೆರವುಗೊಳಿಸಿ ದುರಂತ ಸಂಭವಿಸುವುದಕ್ಕಿಂತ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದೇ ಪರಿಸರದಲ್ಲಿ ವಿದ್ಯುತ್ ತಂತಿ ಕೂಡಾ ಹಾದು ಹೋಗಿದ್ದು, ಮರ ಮುರಿದು ಬಿದ್ದಲ್ಲಿ ತಂತಿಗೂ ತಾಗಲಿದ್ದು ಅದು ಇನ್ನಷ್ಟು ದೊಡ್ಡ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಈ ರಸ್ತೆಯ ಬದಿಗಳಲ್ಲಿರುವ ಮರಗಳನ್ನು ತೆರವುಗೊಳಿಸಬೇಕಾದರೆ ಅರಣ್ಯ ಇಲಾಖೆಯಿಂದ ಪ್ರತ್ಯೇಕ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಇಲಾಖೆಗಳು ಹೊಂದಾಣಿಕೆಯಿಂದ ಕಾರ್ಯಾಚರಿಸಿದರೆ ಸಮಸ್ಯೆಗೆ ಪರಿಹಾರವಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.







