ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಜಯಿಸಿ, ಶಿಕ್ಷಣದ ಮೂಲಕ ಜೀವನವನ್ನು ರೂಪಿಸಿಕೊಂಡು, ಸಮಾಜಸೇವೆಗೆ ತಮ್ಮನ್ನು ಸಮರ್ಪಿಸಿದ ಹಿರಿಯ ವೈದ್ಯರಾಗಿದ್ದಾರೆ ಡಾ| ಬಿ. ನಾರಾಯಣ ನಾಯ್ಕ್. ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪರಿಶ್ರಮ, ದೃಢಸಂಕಲ್ಪ ಮತ್ತು ಸೇವಾಭಾವದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಅಪಾರ ಗೌರವ ಗಳಿಸಿದ್ದಾರೆ.
ಡಾ| ನಾರಾಯಣ ನಾಯ್ಕ್ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತ್‌ನ ಏಳ್ಕಾನ ಬಾಲೆಗುಳಿ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದರು. ಎಂಟು ಮಕ್ಕಳಲ್ಲಿ ಏಳನೇಯವರಾಗಿದ್ದರು. ಅವರ ತಂದೆ ದಿ. ರಾಮ ನಾಯ್ಕ್ ಬಾಲೆಗುಳಿ ಅವರು ಕೃಷಿ ಕೂಲಿ ಕಾರ್ಮಿಕರಾಗಿದ್ದರು. ತಾಯಿ ಯಾವುದೇ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿದರು. ನಾರಾಯಣ ನಾಯ್ಕ್ರ ಬಾಲ್ಯವು ತೀವ್ರ ಬಡತನದಲ್ಲಿ ಕಳೆದಿತ್ತು. ಹಲವಾರು ದಿನಗಳಲ್ಲಿ ಸಿಹಿ ಗೆಣಸು, ಮರಗೆಣಸು ಹಾಗೂ ಸಕ್ಕರೆ-ಹಾಲಿಲ್ಲದ ಚಹಾ ಮಾತ್ರವೇ ಆಹಾರವಾಗಿತ್ತು.
ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಎ.ಯು.ಪಿ. ಶಾಲೆ, ಪೆರ್ಲ ಎಸ್.ಎನ್. ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. 1979ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ರಲ್ಲಿ 512 ಅಂಕಗಳನ್ನು ಪಡೆದು ಶಾಲೆಯ ಪ್ರಥಮ ವಿದ್ಯಾರ್ಥಿಯಾದರು. ನಂತರ ಸರ್ಕಾರಿ ಕಾಲೇಜು ಕಾಸರಗೋಡಿನಲ್ಲಿ ಪ್ರೀ-ಡಿಗ್ರಿ ಪೂರ್ಣಗೊಳಿಸಿದರು.
ಆರ್ಥಿಕ ಸಂಕಷ್ಟದ ಕಾರಣದಿಂದ ಅವರ ಮೂವರು ಸಹೋದರಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಿಲ್ಲ. ಅವರ ಹಿರಿಯ ಸಹೋದರರು ಕೃಷಿ ಕೂಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸಿದರು.
ಹಿರಿಯ ಸಹೋದರ ಅಪ್ಪಣ್ಣ ನಾಯ್ಕ್ ಕುಟುಂಬ ಹಾಗೂ ಸಮುದಾಯದ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದು, ಎರಡು ಪುಸ್ತಕಗಳ ಲೇಖಕರಾಗಿದ್ದಾರೆ. ಇನ್ನೊಬ್ಬ ಹಿರಿಯ ಸಹೋದರ ಡಾ. ಬಿ.ಜಿ. ನಾಯ್ಕ್ ಎಲ್ಲಾ ಕಷ್ಟಗಳನ್ನು ಮೀರಿ ಪಿ.ಎಚ್.ಡಿ. ಪದವಿ ಪಡೆದರು. ಅವರ ಪ್ರೋತ್ಸಾಹ ಮತ್ತು ಆರ್ಥಿಕ ಸಹಾಯದಿಂದ ಡಾ. ನಾರಾಯಣ ನಾಯಕ್ ಹಾಗೂ ಕಿರಿಯ ಸಹೋದರ ಡಾ. ಶಿವ ನಾಯ್ಕ್ ಉನ್ನತ ಶಿಕ್ಷಣ ಪೂರ್ಣಗೊಳಿಸಿದರು. ಡಾ. ಶಿವ ನಾಯ್ಕ್ ನಂತರ ಕೇರಳ ಪಶುಸಂಗೋಪನಾ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತರಾದರು.
ಡಾ| ನಾರಾಯಣ ನಾಯ್ಕ್ 1982ರಲ್ಲಿ ಕೇರಳದ ಮೊದಲ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶ ಪಡೆದರು. ನಂತರ ಡಿಪ್ಲೊಮಾ ಇನ್ ಚೈಲ್ಡ್ ಹೆಲ್ತ್ (DCH) ಪದವಿ ಪಡೆದು ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು.
ಸರ್ಕಾರಿ ವೈದ್ಯಕೀಯ ಸೇವೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಬಳಿಕ ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞರಾಗಿ ನಿವೃತ್ತರಾದರು.
ಪ್ರಸ್ತುತ ಚೆಂಗಳ ಇ.ಕೆ. ನಾಯನಾರ್ ಮೆಮೋರಿಯಲ್ ಸಹಕಾರಿ ಆಸ್ಪತ್ರೆ ಹಾಗೂ ಉಳಿಯತ್ತಡ್ಕ ಕೆ.ಎಸ್. ಅಬ್ದುಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ| ನಾರಾಯಣ ನಾಯ್ಕ್ ಬೇಸಿಕ್ ಲೈಫ್ ಸಪೋರ್ಟ್ (BLS), ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (CPR), ಫಸ್ಟ್ ಏಡ್ ಮತ್ತು ಎಮರ್ಜೆನ್ಸಿ ಲೈಫ್ ಸಪೋರ್ಟ್ (ELS) ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತರಬೇತುದಾರರಾಗಿದ್ದಾರೆ.
ಇದುವರೆಗೆ 250ಕ್ಕೂ ಹೆಚ್ಚು ಪ್ರಾಯೋಗಿಕ (Hands-on) ತರಬೇತಿ ಕಾರ್ಯಕ್ರಮಗಳನ್ನು ನಡೆಸಿ 10,000ಕ್ಕೂ ಹೆಚ್ಚು ವೈದ್ಯರು, ಆರೋಗ್ಯ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಜೀವ ರಕ್ಷಕ ತರಬೇತಿ ನೀಡಿದ್ದಾರೆ.
ಐಎಂಎ ಎಮರ್ಜೆನ್ಸಿ ಲೈಫ್ ಸಪೋರ್ಟ್ ಟ್ರೈನಿಂಗ್ ಇದರ ಉತ್ತರ ವಲಯ ಸಂಯೋಜಕ, ಐಎಂಎ ಕಾಸರಗೋಡು ಇದರ ಲೈಫ್ ಸಪೋರ್ಟ್ ಟ್ರೈನಿಂಗ್ ಇದರ ಜಿಲ್ಲಾ ಸಂಯೋಜಕರಾಗಿದ್ದಾರೆ.
ವೈದ್ಯಕೀಯ ಸೇವೆಯ ಜೊತೆಗೆ ಅನೇಕ ವೈದ್ಯಕೀಯ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಪ್ರಮುಖ ನಾಯಕತ್ವವನ್ನು ಇವರು ವಹಿಸಿದ್ದಾರೆ.
ಇವರು ವಹಿಸಿದ ಪ್ರಮುಖ ಹುದ್ದೆಗಳು
l ಮಾಜಿ ಉಪಾಧ್ಯಕ್ಷರು -ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (IAP), ಕೇರಳ
l ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ – ಐಎಪಿ ಕಾಸರಗೋಡು
l ಮಾಜಿ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಮತ್ತು ಸಂಯೋಜಕರು-ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA), ಕಾಸರಗೋಡು
l ಮಾಜಿ ಅಧ್ಯಕ್ಷರು-ಕೇರಳ ಗವರ್ನ್ಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಷನ್ (KGMOA)
l ಮಾಜಿ ಅಧ್ಯಕ್ಷರು-ರೋಟರಿ ಕ್ಲಬ್ ಆಫ್ ಕಾಸರಗೋಡು
ಪ್ರಮುಖ ಸಾಧನೆಗಳು
l ರೋಟರಿ ಅಧ್ಯಕ್ಷರಾಗಿದ್ದಾಗ 35 ಲಕ್ಷ ರೂಪಾಯಿ ವೆಚ್ಚದ ರಕ್ತ ಸಂಗ್ರಹ ಮತ್ತು ಸಾಗಾಟ ವಾಹನವನ್ನು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾನ ಮಾಡಿದರು. ಈ ಯೋಜನೆಗೆ ತಮ್ಮ ನಿವೃತ್ತಿ ವೇತನದಿಂದಲೇ 10 ಲಕ್ಷ ವೈಯಕ್ತಿಕವಾಗಿ ಕೊಡುಗೆ ನೀಡಿದರು.
l ರೋಟರಿ ಅಧ್ಯಕ್ಷರಾಗಿ 450ಕ್ಕೂ ಹೆಚ್ಚು ಸಮಾಜ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಜ್ಯಾರಿಗೊಳಿಸಿದರು.
l ಕೋವಿಡ್-19 ಸಮಯದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಸಲ್ಲಿಸಿ ಜನಮನ್ನಣೆ ಪಡೆದರು.
ಪ್ರಶಸ್ತಿಗಳು ಮತ್ತು ಗೌರವಗಳು
l ಐಎಂಎ ಮತ್ತು ಐಎಪಿ ವತಿಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ
l ಕೆಜಿಎಂಒಎ ವತಿಯಿಂದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ
l ರೋಟರಿ ಜಿಲ್ಲೆ 3204ರ ಅತ್ಯುತ್ತಮ ರೋಟರಿ ಅಧ್ಯಕ್ಷ ಪ್ರಶಸ್ತಿ
l ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
l ಐಎಂಎ ಮತ್ತು ಕಾಸರಗೋಡು ನಗರಸಭೆಯಿಂದ ಕೋವಿಡ್ ವಾರಿಯರ್ ಆವಾರ್ಡ್ ಗಳಿಸಿದ್ದಾರೆ.
ಕುಟುಂಬ-ಆರೋಗ್ಯ ಸೇವೆಯ ಪರಂಪರೆ
ಡಾ| ನಾರಾಯಣ ನಾಯ್ಕ್ರ ಕುಟುಂಬವು ವೈದ್ಯಕೀಯ, ಶಿಕ್ಷಣ ಮತ್ತು ಸಮಾಜ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದೆ.
ಇವರ ಪತ್ನಿ ಡಾ| ಜ್ಯೋತಿ ಎಸ್., ನಿವೃತ್ತ ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿದ್ದಾರೆ.
ಹಿರಿಯ ಮಗಳು ಡಾ| ಜ್ಯೋಸ್ನಾ ಬಿ.ಎನ್., ಎಂ.ಡಿ. (ಮನೋವೈದ್ಯಕೀಯ), ಕಾಸರಗೋಡಿನ ಕಿಮ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯ ತಜ್ಞೆ. ಅವರ ಪತಿ ಡಾ| ಪ್ರದೀಪ್ ಕುಮಾರ್ ಕೆ., ಕಿಮ್ಸ್ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದಾರೆ.
ಕಿರಿಯ ಮಗಳು ಡಾ| ಕಾವ್ಯ ಬಿ.ಎನ್., ಎಂ.ಎಸ್. (ಪ್ರಸೂತಿ ತಂತ್ರ-ಆಯುರ್ವೇದ). ಅವರ ಪತಿ ಡಾ| ರಾಕೇಶ್ ಜಿ.ಎಚ್., ಮಂಗಳೂರು ಕನಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶರೀರ ಕ್ರಿಯಾ ವಿಜ್ಞಾನ (Physiology) ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ತೀವ್ರ ಬಡತನದಿಂದ ಆರಂಭಿಸಿ, ಸಾವಿರಾರು ಮಕ್ಕಳ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಸಮಾಜ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಡಾ| ಬಿ. ನಾರಾಯಣ ನಾಯ್ಕ್ರ ಜೀವನಗಾಥೆ ಯುವಪೀಳಿಗೆಗೆ ಪ್ರೇರಣೆಯ ದೀಪವಾಗಿದೆ.







