ರಸ್ತೆಯಲ್ಲಿ ಕಟ್ಟಿನಿಂತ ನೀರಿನಲ್ಲಿ ಕಪ್ಪೆಗಳ ವಾಸ: ತಿನ್ನಲು ಬರುವ  ಹಾವುಗಳಿಂದ ಕೃಷ್ಣ ನಗರದ ಪರಿಸರ ನಿವಾಸಿಗಳಿಗೆ ನಡೆದಾಡಲು ಭೀತಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ ಕೃಷ್ಣ ನಗರ ಬಳಿ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಸಂಚಾರ ಸಮಸ್ಯೆ ಎದುರಾಗಿದೆ. ನಯಾ ಬಜಾರ್-ಚೆರುಗೋಳಿ ರಸ್ತೆಯಿಂದ ಕೃಷ್ಣನಗರ ಭಾಗಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯಲ್ಲಿ ನೀರು ಕುಟ್ಟಿ ನಿಲ್ಲುತ್ತಿದ್ದು, ಈ ಭಾಗದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ನೀರು ಕಟ್ಟಿ ನಿಲ್ಲುವ ಕಾರಣ ಇಲ್ಲಿ ಕಪ್ಪೆಗಳು, ಸೊಳ್ಳೆಗಳು ಹೆಚ್ಚಿದ್ದು, ಜೊತೆಗೆ ಕಪ್ಪೆಗಳನ್ನು ತಿನ್ನಲೆಂದು ವಿವಿಧ ಜಾತಿಯ ಹಾವುಗಳು ಇಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಈ ದಾರಿಯಾಗಿ ಸಾಗಿದ ಓರ್ವರಿಗೆ ದೊಡ್ಡ ದೊಂದು ಕನ್ನಡಿ ಹಾವು ಕಂಡುಬಂದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ವಾಗದಿದ್ದರೂ ಎಲ್ಲ ಸಮಯಗಳಲ್ಲೂ ಈ ಅದೃಷ್ಟ ಪಾರು ಮಾಡಬಹುದೆಂದು ತಿಳಿದುಕೊಳ್ಳಬಾರದು. ನೀರು ಕಟ್ಟಿ ಕೆಸರು ತುಂಬಿ ಸೊಳ್ಳೆಗಳು ಕೂಡಾ ಮೊಟ್ಟೆ ಇಟ್ಟು ಬೆಳೆಯುತ್ತವೆ.

ರಸ್ತೆಯ ಕಾಂಕ್ರಿಟೀ ಕರಣ ನಡೆಸಿ ಸುಮಾರು ಐದು ವರ್ಷಗಳಾಗಿದ್ದು, ಆದರೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿಲ್ಲ. ಕೃಷ್ಣ ನಗರ ನೀರಿನ ಟ್ಯಾಂಕ್ ಬಳಿಯಿಂದ ಸುಮಾರು 1೦೦ ಮೀಟರ್ ದೂರಕ್ಕೆ ಕಾಂಕ್ರೀಟ್ ಹಾಕಲಾಗಿದ್ದು, ಇಲ್ಲಿ ನೀರು ಕಟ್ಟಿ ನಿಂತಿದೆ. ರಸ್ತೆಯ ಎರಡು ಬದಿಯಲ್ಲೂ ಎತ್ತರವಾದ ಕಾರಣ ನೀರು ಕಟ್ಟಿ ನಿಲ್ಲುತ್ತಿದೆ.

ಈ ಪ್ರದೇಶದಲ್ಲಿ ಹಲವಾರು ಮನೆಗಳಿದ್ದು, ರಾತ್ರಿ ಹಗಲೆನ್ನದೆ ಸಂಚರಿಸುತ್ತಿರುತ್ತಾರೆ. ಶಾಲೆಗೆ ಮಕ್ಕಳು ಕೂಡಾ ಇದೇ ದಾರಿಯಲ್ಲಿ ಸಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಾವಿನ ಭೀತಿಯನ್ನು ಇಲ್ಲದಂತೆ ಮಾಡಲು, ಕೆಸರು ನೀರಲ್ಲಿ ನಡೆದಾಡುವುದನ್ನು ತಪ್ಪಿಸಲು ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page