ಮಂಗಳೂರು: 16ರ ಹರೆಯದ ಬಾಲಕಿಯ ಮೃತದೇಹ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲಪಾಡಿ ಸೋಮೇಶ್ವರದ ಶಾಂತಿ ಎಂಬವರ ಪುತ್ರಿ ಸಮನ್ವಿ ಮೃತಪಟ್ಟ ಬಾಲಕಿ. ನಿನ್ನೆ ಸಂಜೆ ಘಟನೆ ನಡೆದಿದೆ. ತಾಯಿ ಹಾಗೂ ಹಿರಿಯ ಸಹೋದರಿ ಮನೆಯಲ್ಲಿದ್ದ ವೇಳೆಯೇ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ. ಸ್ನಾನಕ್ಕೆ ತೆರಳುವುದಾಗಿ ಮನೆಯವರಲ್ಲಿ ತಿಳಿಸಿ ಹೋದ ಬಾಲಕಿ ತುಂಬ ಸಮಯ ಕಳೆದರೂ ಬಾರದ ಹಿನ್ನೆಲೆಯಲ್ಲಿ ಶಂಕೆ ತೋರಿದ ಮನೆಮಂದಿ ಬಾಗಿಲನ್ನು ಮುರಿದು ಒಳನುಗ್ಗಿ ನೋಡಿದಾಗ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ.
ಪ್ರಥಮ ವರ್ಷ ಪಿಯುಸಿ ವಿದ್ಯಾರ್ಥಿನಿಯಾದ ಸಮನ್ವಿ ಕಲಿಕೆಯಲ್ಲಿ ಮುಂದಿದ್ದಳು ಎನ್ನಲಾಗಿದೆ. ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.






